ಕೂಡಿಗೆ, ಜೂ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರಾರಂಭಿಸಲು ಉದ್ದೇಶಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕಟ್ಟಡ ಇದೀಗ ಕಾಡುಮಯವಾಗಿದೆ.

ಈ ಭಾಗದ ಜನರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯು ಹಲವು ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡು ಹತ್ತು ವರ್ಷಗಳೇ ಕಳೆದು ಕಟ್ಟಡದ ಒಳಗೆ ಮತ್ತು ಸುತ್ತಲೂ ಗಿಡಗಂಟಿಗಳು ಬೆಳೆದು ಇದರ ಬಗ್ಗೆ ಇಲಾಖೆಯವರು ಯಾವದೇ ರೀತಿಯ ಕ್ರಮ ಕೈಗೊಳ್ಳದೆ, ಸುಮ್ಮನಿರುವದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಮದಲಾಪುರ ಸುತ್ತಮುತ್ತ ಐದು ಗ್ರಾಮಗಳ ಕುಟುಂಬಗಳೊಂದಿಗೆ, ಇದೀಗ ಬ್ಯಾಡಗೊಟ್ಟದಲ್ಲಿ 280ಕ್ಕೂ ಹೆಚ್ಚು ಆದಿವಾಸಿಗಳ ಕುಟುಂಬ ಈಗ ಹೊಸದಾಗಿ ಸೇರ್ಪಡೆಗೊಂಡಿದ್ದು, ಈ ಭಾಗಗಳಿಂದ ರೋಗಿಗಳು 5 ಕಿ.ಮೀ. ದೂರದಲ್ಲಿರುವ ಕೂಡಿಗೆ ಆಸ್ಪತ್ರೆಯನ್ನೇ ಅವಲಂಭಿಸಿದ್ದು, ಈ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಉಪಘಟಕದ ನಿರ್ಮಾಣ ಅನಿವಾರ್ಯವಾಗಿದೆ.

ಇದಕ್ಕೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು, ಶಾಸಕರು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಜನಪ್ರತಿನಿಧಿಗಳು ತುರ್ತಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಸದಸ್ಯ ರವಿ ಮತ್ತು ಸ್ಥಳೀಯ ನೂರಾರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೂಡಿಗೆಯ ಗ್ರಾ.ಪಂ. ಗ್ರಾಮಸಭೆಯಲ್ಲಿ ಸ್ಥಳೀಯ ಮಾಜಿ ಸದಸ್ಯ ಐ.ಎಸ್. ಗಣೇಶ್ ಅರ್ಧಕ್ಕೆ ನಿಂತಿರುವ ಆರೋಗ್ಯ ಕೇಂದ್ರ ಕಟ್ಟಡವನ್ನು ಗ್ರಾಮ ಪಂಚಾಯಿತಿಯವರು ಬಾಡಿಗೆ ನೀಡಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಿದ್ದರು. ಇದಕ್ಕೆ ಯಾವದೇ ರೀತಿಯ ಹೇಳಿಕೆ ನೀಡದೆ ಗ್ರಾಮಸಭೆ ಮುಂದೂಡಲ್ಪಟ್ಟಿತ್ತು.