ಮಡಿಕೇರಿ, ಜೂ. 15: ಇಂದಿಗೆ ಒಂದು ತಿಂಗಳ ಹಿಂದೆ, ಮಂಗಳೂರಿನಿಂದ ಬೆಂಗಳೂರಿಗೆ, ಆ್ಯಕ್ಸಿಸ್ ಬ್ಯಾಂಕ್‍ನಿಂದ ಸಾಗಾಟ ಮಾಡುತ್ತಿದ್ದ ರೂ. 7.50 ಕೋಟಿ ಹಣವನ್ನು ದೋಚಿದ್ದ ಪ್ರಕರಣದ ಮೂವರು ವಂಚಕರು ಇನ್ನೂ ಕೂಡ ತಲೆಮರೆಸಿಕೊಂಡಿದ್ದಾರೆ.

ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮದ ತಂಬುಗುತ್ತಿರ ಪಿ. ಬಸಪ್ಪ ಹಾಗೂ ಅದೇ ಕುಟುಂಬದ ಸಹೋದರರಾದ ಟಿ.ಎ. ಭೀಮಯ್ಯ ಮತ್ತು ಟಿ.ಎ. ಉತ್ತಪ್ಪ ಪೊಲೀಸರ ಹದ್ದುಗಣ್ಣಿನಿಂದ ತಪ್ಪಿಸಿಕೊಂಡಿದ್ದು, ಈ ಮೂವರ ಬಂಧನ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ರಹಸ್ಯ ಬಯಲಿಗೆಳೆ ಯುವದು ಸಾಧ್ಯವೆಂದು ತನಿಖಾಧಿ ಕಾರಿಯಾಗಿರುವ ಮಂಗಳೂರಿನ ಎಸಿಪಿ ಎನ್.ಎಸ್. ಶೃತಿ ಖಚಿತಪಡಿಸಿದ್ದಾರೆ.

ರೂ. 7.50 ಕೋಟಿ ದರೋಡೆ ಪ್ರಕರಣದ ಸೂತ್ರಧಾರಿ ಟಿ.ಎ. ಭೀಮಯ್ಯ ಹಾಗೂ ಇತರರು ಸೆರೆಸಿಕ್ಕಿದ ಬಳಿಕವಷ್ಟೇ ಸಮಗ್ರ ಮಾಹಿತಿ ಲಭಿಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಈ ಮೂವರು ಆರೋಪಿಗಳು ಇನ್ನೂ ಕೂಡ ಕಾಡಿನಲ್ಲಿ ಅಡಗಿರುವ ಶಂಕೆ ವ್ಯಕ್ತಪಡಿಸಿದ್ದು, ಹಣದ ಆಮಿಷದಿಂದ ಕೆಲವರು ಆರೋಪಿಗಳನ್ನು ರಕ್ಷಿಸುತ್ತಿರುವ ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಮಳೆ ಹಾಗೂ ಜಿಗಣೆ ಕಾಟದಿಂದ ಕುಂಬಾರಗಡಿಗೆ ಸುತ್ತಮುತ್ತ ಕಾಡಿನಲ್ಲಿ ಆರೋಪಿಗಳ ಹುಡುಕಾಟ ಪೊಲೀಸರಿಗೆ ತೊಡಕಾಗಿದ್ದು, ಆ ಪ್ರದೇಶದಲ್ಲಿ ಮಳೆ, ಮೋದ ಕವಿದಿರುವ ಪರಿಣಾಮ ಮೊಬೈಲ್ ಸಂಪರ್ಕ ಇತ್ಯಾದಿ ಸಮಸ್ಯೆಯಾಗಿದೆ ಎಂದು ಸುಳಿವು ನೀಡಿದ್ದಾರೆ.

ಈಗಾಗಲೇ ಆರೋಪಿಗಳಿಗೆ ನೆರವು ನೀಡುತ್ತಿದ್ದ ಸುಳಿವಿನ ಮೇರೆಗೆ ಅನೇಕರನ್ನು ಪತ್ತೆ ಹಚ್ಚಿ, ವಿಚಾರಣೆ ನಡೆಸುವ ಮೂಲಕ ಎಚ್ಚರಿಕೆ ನೀಡಿ ಕಳುಹಿಸಲಾಗಿದ್ದು, ಆರೋಪಿಗಳಿಗೆ ರಕ್ಷಣೆ ನೀಡುವದು ಅಥವಾ ಬೇರೆ ರೀತಿಯಲ್ಲಿ ನೆರವು ಕಲ್ಪಿಸುವದು ಅಪರಾಧ ಎಂಬ ಅರಿವು ಗ್ರಾಮಸ್ಥರಿಗಿರಬೇಕೆಂದು ಸಲಹೆ ನೀಡಿದ್ದಾರೆ.

ಕಳೆದ ಮೇ 11 ರಂದು ರೂ. 7.50 ಕೋಟಿ ದೋಚಿದ್ದ ಬೆನ್ನಲ್ಲೇ, ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರ ಸಹಕಾರದಿಂದ ಮಂಗಳೂರ ಪೊಲೀಸ್ ತಂಡ, ಆರೋಪಿಗಳಾದ ಟಿ.ಎ. ಪೂವಣ್ಣ, ಕರಿಬಸವ ಹಾಗೂ ಕಾಶಿ ಕಾರ್ಯಪ್ಪನನ್ನು ಕುಂಬಾರಗಡಿಗೆ ಕಾಡಿನಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಆ ಬಳಿಕ ಮನುಕುಮಾರ್ ಮತ್ತು ರವಿ ಎಂಬಿಬ್ಬರು ಆರೋಪಿಗಳಿಗೆ ನೆರವು ಒದಗಿಸಿ ಹಣ ಪಾಲು ಪಡೆದಿದ್ದ ಖಚಿತ ಮಾಹಿತಿಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮತ್ತೋರ್ವ ಆರೋಪಿ ಗಿರೀಶ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾತ್ರವಲ್ಲದೆ ತಲೆಮರೆಸಿ ಕೊಂಡಿರುವ ಮೂವರಿಗೆ ಬೇರೆ ಬೇರೆ ರೀತಿಯ ನೆರವು ಕಲ್ಪಿಸುತ್ತಿದ್ದ ಸುಳಿವಿನಿಂದ ಹಲವರ ವಿಚಾರಣೆ ನಡೆಸಿ, ಎಚ್ಚರಿಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಸುಳಿವು ಸಿಕ್ಕಿದರೆ ಅಥವಾ ಯಾರಾದರೂ ಆಸರೆ ಕಲ್ಪಿಸಲು ಮುಂದಾದ ಬಗ್ಗೆ ಪೊಲೀಸರಿಗೆ ಖಚಿತವಾಗಿ ತಿಳಿದರೆ, ಕಾನೂನು ಕ್ರಮ ಜರುಗಿಸಲು ಇಲಾಖೆ ಹದ್ದುಗಣ್ಣಿಟ್ಟಿದೆ. ಕಳೆದ ಮೇ 11 ರಂದು ರೂ. 7.50 ಕೋಟಿ ದೋಚಿದ್ದ ಪ್ರಕರಣ ಬಹಿರಂಗ ಗೊಂಡ ಬೆನ್ನಲ್ಲೇ ಮಂಗಳೂರು ಪೊಲೀಸರಿಗೆ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಕ್ಷಿಪ್ರ ಸ್ಪಂದನದೊಂದಿಗೆ, ಮೂವರ ಬಂಧನ ಸಹಿತ ಅಂದಾಜು ರೂ. 6.70 ಕೋಟಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

- ಶ್ರೀಸುತ