ಮಡಿಕೇರಿ, ಜೂ. 15: ಮಡಿಕೇರಿಯ ಪೆನ್‍ಶನ್‍ಲೇನ್ ಮಾರ್ಗದ ಕಟ್ಟಡವೊಂದರಲ್ಲಿ ‘ಮಾನಸಧಾರಾ’ ಎಂಬ ಹೆಸರಿನ ಫಲಕವೊಂದು ನೇತಾಡುತ್ತಿದೆ. ಫಲಕದ ಅಡಿಭಾಗದಲ್ಲಿ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ಎಂದು ನಮೂದಿಸಲಾಗಿದೆ.

ಕುತೂಹಲದೊಂದಿಗೆ ಈ ಬಂಗಲೆಯೊಳಗೆ ಹೊಕ್ಕಾಗ ಇದೊಂದು ಮಾನಸಿಕ ರೋಗಿಗಳ ಹೆಸರಿನಲ್ಲಿ ಮಡಿಕೇರಿ ಜನರನ್ನು ‘ಮಂಗ’ ಮಾಡುವ ಸಂಸ್ಥೆಯೆಂಬ ಅನುಮಾನ ಹುಟ್ಟಿಕೊಂಡಿತು.

ಕಾರಣ ಇಡೀ ಬಂಗಲೆಯ ಕೋಣೆ ಕೋಣೆ ಹೊಕ್ಕು ಪರಿಶೀಲಿಸಿದಾಗ ಅಲ್ಲಿ ಕಣ್ಣಿಗೆ ಕಂಡಿದ್ದು ಸ್ಥಳೀಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿರುವ ವಿಶೇಷ ಚೇತನ ತರುಣ ಮಾತ್ರ!

‘ಮಾನಸಧಾರಾ’ ಎಂದು ದೊಡ್ಡ ಅಕ್ಷರಗಳಲ್ಲಿ ಗಮನಸೆಳೆಯುವ ಈ ಫಲಕದಲ್ಲಿ ಕರ್ನಾಟಕ ರಾಜ್ಯ ಸರಕಾರದ ಹೆಸರನ್ನು ಬಳಸಿಕೊಳ್ಳಲಾಗಿದೆ. ಇದರೊಂದಿಗೆ ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರಕಾರಿ ಆಸ್ಪತ್ರೆ ಇತ್ಯಾದಿ ಹೆಸರುಗಳ ದುರ್ಬಳಕೆಯೊಂದಿಗೆ ‘ಗ್ರೀನ್ ಡಾಟ್ ಟ್ರಸ್ಟ್’ ಎಂದು ನೋಂದಾಯಿತ ಸೇವಾ ಸಂಸ್ಥೆ ಇದಾಗಿದೆ ಎಂಬದಾಗಿ ಫಲಕದಲ್ಲಿ ಹೆಸರಿಸಲಾಗಿದೆ.

ಕಟ್ಟಡದೊಳಗೆ ಲಭಿಸಿದ ಭಿತ್ತಿಪತ್ರವೊಂದರದಲ್ಲಿ ಮಾನಸಿಕ ರೋಗಿಗಳಿಗೆ ಬೆಳಿಗ್ಗೆಯಿಂದ ಸಂಜೆಯತನಕ ಒಂದಿಷ್ಟು ಚಟುವಟಿಕೆಗಳ ವೇಳಾಪಟ್ಟಿಯನ್ನು ಬಿತ್ತರಿಸಿರುವದು ಕಂಡು ಬರುತ್ತದೆ. ಆದರೆ ಇಂತಹ ಯಾವದೇ ಚಟುವಟಿಕೆಗಳಿಗೆ ಇಲ್ಲಿ ಯಾರೋಬ್ಬರು ಇದ್ದಂತಿಲ್ಲ.

ಇನ್ನು ಜಿಲ್ಲಾ ಪಂಚಾಯಿತಿ ಸೇರಿದಂತೆ ಸಂಬಂಧಿಸಿದ ಜವಾಬ್ದಾರಿಯುತರಿಗೆ ಕೂಡ ನಮ್ಮ ಜಿಲ್ಲೆಯಲ್ಲಿ ಸರಕಾರದ ಸಹಾಯ ಧನದೊಂದಿಗೆ ಇಂತಹ ಸೇವಾ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಖರ ಮಾಹಿತಿಯೇ ಇದ್ದಂತಿಲ್ಲ?

ಇನ್ನು ಈ ಸಂಸ್ಥೆಯ ಮುಖ್ಯಸ್ಥರ ಹೆಸರಿನಲ್ಲಿ ಒಂದಿಷ್ಟು ಮೊಬೈಲ್ ಸಂಖ್ಯೆಗಳನ್ನು ಭಿತ್ತಿಪತ್ರದೊಂದಿಗೆ ಪ್ರದರ್ಶಿಸಿದ್ದು, ಈ ಮಂದಿ ಮಾನಸಿಕ ರೋಗಿಗಳ ಬಗ್ಗೆ ಹೊಂದಿರಬಹುದಾದ ಕಾಳಜಿ ಕುರಿತು ತಿಳಿದುಕೊಳ್ಳಲೆಂದು ಕರೆಯನ್ನು ಮಾಡಲಾಯಿತಾದರೂ ಕರೆ ಸ್ವೀಕರಿಸುವ ಸೌಜನ್ಯವನ್ನೂ ತೋರಲೇ ಇಲ್ಲ. ಹಲವು ಬಾರಿ ಈ ಪ್ರಯತ್ನ ನಡೆಸಿದರೂ ಸಂಪರ್ಕ ಅಸಾಧ್ಯವೆನಿಸಿದಾಗ ಇದೊಂದು ‘ನುಂಗಣ್ಣ’ಗಳ ಸಂಸ್ಥೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಹಸಿವು ಮುಕ್ತ ಕರ್ನಾಟಕದಂತಹ ಅನೇಕ ಯೋಜನೆಗಳ ಕೆಲ ನುಂಗಣ್ಣರಂತೆ ಇದು ಕೂಡ ಆ ಪಟ್ಟಿಯಲ್ಲಿ ಇರುವಂತಹ ಬೇನಾಮಿ ಸಂಸ್ಥೆಯೇ ಎಂಬ ಸಂಶಯ ಮೂಡಿದ್ದು, ಸಂಬಂಧಪಟ್ಟವರೇ ‘ಮಾನಸಧಾರಾ’ದ ನಿಖರ ಚಟುವಟಿಕೆ ಅಥವಾ ಸೇವೆಯ ಕಾರ್ಯ ಯೋಜನೆ ನೀಡಬೇಕಿದೆ. - ಶ್ರೀಸುತ