ಮಡಿಕೇರಿ, ಜೂ. 15: ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಯಾಗಿ ಕೊಡಗಿನ ಅಳಿಯ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಸದಸ್ಯ ಡಿ.ಹೆಚ್. ಶಂಕರಮೂರ್ತಿ ಅವರು ಇಂದು ನಡೆದ ಅವಿಶ್ವಾಸ ನಿರ್ಣಯ ವಿರುದ್ಧ ಒಂದು ಮತದ ಗೆಲುವಿನೊಂದಿಗೆ ಮುಂದುವರಿದಿದ್ದಾರೆ.ಪ್ರಸಕ್ತ ವಿಧಾನ ಮಂಡಲ ಅಧಿವೇಶನದ ನಡುವೆ ಸಭಾಪತಿ ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಜೆಡಿಎಸ್ ಬೆಂಬಲ ಕೋರಿ ಸಭಾಪತಿ ಸ್ಥಾನದಿಂದ ಶಂಕರಮೂರ್ತಿ ಅವರನ್ನು ಕೆಳಗಿಳಿಸಲು ತಂತ್ರಗಾರಿಕೆ ನಡೆಸಿತ್ತು.ಇಂದು ನಡೆದ ಅಚ್ಚರಿಯ ಬೆಳವಣಿಗೆಯೊಂದಿಗೆ ಮಧ್ಯಾಹ್ನ ಮತದಾನ ನಡೆದು ಅವಿಶ್ವಾಸ ನಿರ್ಣಯ ಪರವಾಗಿ 36 ಹಾಗೂ ನಿರ್ಣಯ ವಿರುದ್ಧ 37 ಮತಗಳು ಚಲಾಯಿಸಲ್ಪಟ್ಟು ಏಕೈಕ ಮತದಿಂದ ಶಂಕರಮೂರ್ತಿ ಸಭಾಪತಿ ಸ್ಥಾನ ಉಳಿಸಿಕೊಂಡಿದ್ದಾರೆ.

ಕೊಡಗಿನ ಅಳಿಯ: ಮೂಲತಃ ಶಿವಮೊಗ್ಗದ ವರ್ತಕ ಕುಟುಂಬದ ಶಂಕರಮೂರ್ತಿ ಅವರು 1967ರಲ್ಲಿ ಕುಶಾಲನಗರದ ವ್ಯಾಪಾರೋದ್ಯಮಿ ನಾಗಪ್ಪಶೆಟ್ಟಿ ಪುತ್ರಿ ಸತ್ಯವತಿಯನ್ನು ವಿವಾಹವಾಗಿದ್ದು, ಬಾಲ್ಯದಿಂದಲೇ ಆರೆಸ್ಸೆಸ್ ಸಂಪರ್ಕದೊಂದಿಗೆ ಜನಸಂಘ ಹಾಗೂ ಅನಂತರದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರು. 1988ರಿಂದ ಸತತವಾಗಿ ಕೊಡಗು ಸೇರಿದಂತೆ ನೈರುತ್ಯ ಪದವೀಧರ ಕ್ಷೇತ್ರದಿಂದ ಮೇಲ್ಮನೆ ಸದಸ್ಯರಾಗಿ, ಪ್ರಸಕ್ತ ಐದನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ಜನತಾದಳ (ಎಸ್) ಬೆಂಬಲದಿಂದ ಸಭಾಪತಿ ಸ್ಥಾನ ಅಲಂಕರಿಸಿದ್ದಾರೆ.

ಜೆಡಿಎಸ್‍ನ ಮೇಲ್ಮನೆ ಸದಸ್ಯ ಮರಿತಿಪ್ಪೇಗೌಡ ಅವರು ಉಪಸಭಾಪತಿಯಾಗಿದ್ದು, ಹೀಗಾಗಿ ಕುತಂತ್ರ ರಾಜಕಾರಣಕ್ಕೆ ಯತ್ನಿಸದೆ ಈ ಹಿಂದಿನ ಹೊಂದಾಣಿಕೆಯಂತೆ ಶಂಕರಮೂರ್ತಿಯವರನ್ನು ಬೆಂಬಲಿಸಿರುವದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಜೆಡಿಎಸ್ ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಸೇರಿದ್ದರಿಂದ ಕಾಂಗ್ರೆಸ್ ಸೋಲುಕಂಡಿದ್ದು, ಇದರಲ್ಲಿ ಯಾವದೇ ಮುಖಭಂಗವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಮುಂದುವರಿದ ಸಂಬಂಧ

ಕುಶಾಲನಗರದ ಉದ್ಯಮಿ ವಿ.ಎನ್. ವಸಂತಕುಮಾರ್ ಅವರ ಸಹೋದರಿಯನ್ನು ಮದುವೆಯಾಗಿರುವ ಶಂಕರಮೂರ್ತಿ, ಆ ಸಂಬಂಧ ಮುಂದುವರಿಸಿ ತಮ್ಮ ಮಗ ಅರುಣ್‍ಗೆ, ವಸಂತಕುಮಾರ್ ಪುತ್ರಿ ಪ್ರತಿಭಾಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಸೊಸೆಯಾಗಿ ಸ್ವೀಕರಿಸಿ ಕುಶಾಲನಗರದ ನೆಂಟಸ್ಥನ ಮುಂದುವರಿಸಿದ್ದಾರೆ.

ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕುಶಾಲನಗರಕ್ಕೆ ಇಂಜಿನಿಯರಿಂಗ್ ಕಾಲೇಜನ್ನು ತಂದಿದ್ದು, ಶಂಕರಮೂರ್ತಿ ಅವರಿಗೆ ಈ ನಾಡಿನ ಬಗ್ಗೆ ಇದ್ದಂತಹ ವಿಶೇಷ ಮೋಹದಿಂದಲೇ ಎಂದು ಅವರ ಬಾವ ವಿ.ಎನ್. ವಸಂತಕುಮಾರ್ ನುಡಿಯುತ್ತಾರೆ. ಒಟ್ಟಿನಲ್ಲಿ ಈ ಕೊಡಗಿನ ಅಳಿಯ ಇಂದು ಮೇಲ್ಮನೆಯಲ್ಲಿ ಕೇವಲ ಒಂದು ಮತದಿಂದ ಗೆಲ್ಲುವ ಮೂಲಕ ಸಭಾಪತಿ ಸ್ಥಾನ ಉಳಿಸಿಕೊಂಡಿರುವದು ಕೊಡಗಿನ ನೈರುತ್ಯ ಕ್ಷೇತ್ರ ಮತದಾರರ ಸಹಿತ ಅವರ ಅಭಿಮಾನಿಗಳು, ಬಂಧುವರ್ಗದಲ್ಲಿ ಹರ್ಷ ಮೂಡಿಸಿದೆ.