ಮಡಿಕೇರಿ, ಜೂ. 15 :ಕೊಡಗಿನ ಬ್ರಹ್ಮಗಿರಿ ಹಾಗೂ ತಲಕಾವೇರಿ ವನ್ಯಧಾಮ ಪ್ರದೇಶಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡುವ ಮೂಲಕ ಕೇಂದ್ರ ಸರಕಾರÀ ಜನಸಾಮಾನ್ಯರ ಬದುಕಿನ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದು, ಈ ಬೆಳವಣಿಗೆಯ ಹೊಣೆ ಹೊತ್ತು ಸಂಸದ ಪ್ರತಾಪಸಿಂಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟುಮೊಣ್ಣಪ್ಪ, ಡಾ.ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಿ, ನೀವು ನಿಶ್ಚಿಂತರಾಗಿರಿ ಎಂದು ಭರವಸೆ ನೀಡಿದ್ದ ಸಂಸದ ಪ್ರತಾಪ ಸಿಂಹ ಇದೀಗ ತಮ್ಮ ಜವಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಂಸದರÀ ಬೇಜವಾಬ್ದಾರಿತನ ದಿಂದಲೇ ಕೊಡಗಿನ ಜನರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರಕಾರದ ತಪ್ಪನ್ನು ಮುಚ್ಚಿ ಹಾಕುವದಕ್ಕಾಗಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಾದಿ ತಪ್ಪಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತÀರು ಇನ್ನು ಮುಂದೆಯೂ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದರೆ ಅದು ಬಿಜೆಪಿ ಮಂದಿಯ ಮೂರ್ಖ ತನವಾಗುತ್ತದೆ ಎಂದು ಟೀಕಿಸಿದರು.

ಕೃಷಿಯನ್ನೇ ನಂಬಿ ಬದುಕುತ್ತಿರುವ ಕೊಡಗಿನ ಮೂಲ ನಿವಾಸಿಗಳಿಗೆ ಕೇಂದ್ರ ಸರಕಾರದ ಅಧಿಸೂಚನೆ ಯಿಂದ ತಮ್ಮ ಅಸ್ತಿತ್ವದ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಯಾವ ಆದೇಶ, ಘೋಷಣೆಗಳಿಲ್ಲದೆ ಕೊಡಗಿನ ಪರಿಸರವನ್ನು ಪೂರ್ವಜರು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಪರಿಸರವನ್ನೇ ತಮ್ಮ ಆಸ್ತಿ ಎಂದು ಕಾಪಾಡಿಕೊಂಡು ಬಂದಿರುವ ತಲಕಾವೇರಿ, ಬ್ರಹ್ಮಗಿರಿ ವ್ಯಾಪ್ತಿಯ ಜನರಿಗೆ ರಕ್ಷಣೆ ಇಲ್ಲದಾಗಿದ್ದು, ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರತಾಪಸಿಂಹ ಅವರಿಂದ ನ್ಯಾಯ ದೊರೆಯುವ ಭರವಸೆಗಳು ಹುಸಿಯಾಗಿದೆ.

ಪ್ರತಾಪಸಿಂಹ ಅವರು ಪ್ರಧಾನಿ ನರೇಂದ್ರಮೋದಿಯವರ ಆತ್ಮೀಯರು ಮಾತ್ರವಲ್ಲ ಪ್ರಭಾವಿಗಳೆಂದು ಪ್ರಚಾರ ಪಡೆದಿದ್ದಾರೆ. ಆದರೆ ಕೊಡಗಿನ ಜನರಿಗೆ ನ್ಯಾಯ ದೊರಕಿಸಿ ಕೊಡುವದರಲ್ಲಿ ಇವರು ಸಂಪೂರ್ಣವಾಗಿ ಸೋತಿದ್ದಾರೆ. ಪ್ರಧಾನಮಂತ್ರಿ ಅಥವಾ ಕೇಂದ್ರ ಪರಿಸರ ಖಾತೆ ಸಚಿವರ ಮೇಲೆ ತಮ್ಮ ಪ್ರಭಾವವನ್ನು ಬೀರಿ ಕೊಡಗಿನ ಜನರ ಪರವಾದ ನಿಲುವುಗಳನ್ನು ಸಂಸದರು ತೆಗೆದುಕೊಳ್ಳಬಹುದಾಗಿತ್ತು.

ರಾಜ್ಯ ಕಾಂಗ್ರೆಸ್ ಸರಕಾರ ಜನರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿತ್ತು. ಕೊಡಗಿನ ಜನರು ಈ ಆದೇಶ ಜಾರಿಯಾಗಬಾರದು ಎಂದು ಹೋರಾಟಗಳನ್ನು ಮಾಡಿದರೂ ಏಕಪಕ್ಷೀಯವಾಗಿ

(ಮೊದಲ ಪುಟದಿಂದ) ನಿರ್ಧಾರವನ್ನು ಕೈಗೊಂಡು ಆದೇಶ ಹೊರಡಿಸಿದೆ. ಜನರು ಸಲ್ಲಿಸಿದ ಆಕ್ಷೇಪಣೆಗೆ ಸ್ಪಂದಿಸದೆ ಮತ್ತು ಗೌರವವನ್ನು ನೀಡದೆ ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಟಾಟು ಮೊಣ್ಣಪ್ಪ ಆರೋಪಿಸಿದರು.

ಶತಶತಮಾನಗಳಿಂದ ಬದುಕು ಸಾಗಿಸುತ್ತಿರುವ ಕೊಡಗಿನ ಜನರ ಬದುಕಿಗೆ ಮಾರಕವಾಗಿರುವ ಆದೇಶವನ್ನು ಕೇಂದ್ರ ಸರಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿರುವ ಅವರು ತಪ್ಪಿದಲ್ಲಿ ಪಕ್ಷಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಡಿ ಹೋರಾಟವನ್ನು ರೂಪಿಸುವದಾಗಿ ಎಚ್ಚರಿಕೆ ನೀಡಿದರು. ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯನ್ನು ಕಡಿತಗೊಳಿಸದೆ ಜಿಲ್ಲೆಯ ಜನರಿಗೇನಾದರೂ ಸಂಕಷ್ಟ ಎದುರಾದರೆ ಅದರ ನೇರ ಹೊಣೆಯನ್ನು ಪ್ರತಾಪ್ ಸಿಂಹ ಅವರು ಹೊರಬೇಕಾಗುತ್ತದೆ ಎಂದು ಟಾಟುಮೊಣ್ಣಪ್ಪ ಹೇಳಿದರು.

ಸಂಸದರನ್ನು ಹುಡುಕಿಕೊಡಿ: ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರಮೈನಾ ಮಾತನಾಡಿ, ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಸಂಸದ ಪ್ರತಾಪಸಿಂಹ ಅವರನ್ನು ಬಿಜೆಪಿ ಮಂದಿ ಹುಡಿಕಿಕೊಡಲಿ, ಅವರಿಂದ ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಕಾಂಗ್ರೆಸ್ ಹುಡುಕಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ, ಸಂಸದ ಪ್ರತಾಪಸಿಂಹ ಅವರಿಗೆ ಯಾವ ಬಾವುಟ ಪ್ರದರ್ಶಿಸಲಿದೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್, ಕಾಂಗ್ರೆಸ್ ಸೇವಾದಳದ ನಗರಾಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ ಹಾಗೂ ವೃತ್ತಿಪರ ಘಟಕದ ಅಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ ಉಪಸ್ಥಿತರಿದ್ದರು.