ಸುನಿಲ್ ಪ್ರಶ್ನೆಗೆ ಕಂದಾಯ ಸಚಿವರ ಉತ್ತರ

ಮಡಿಕೇರಿ, ಜೂ. 15: ಸರಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸಲು ತಹಶೀಲ್ದಾರುಗಳು ಅಧಿಕಾರ ಹೊಂದಿರುತ್ತಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಅವರು ರಾಜ್ಯದಲ್ಲಿ ಸರಕಾರಿ ಜಾಗದಲ್ಲಿ ನೆಲೆಸಿರುವ ಮಂದಿಗೆ ಹಕ್ಕುಪತ್ರ ನೀಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ದಿನಾಂಕ 1.1.2012 ರ ಪೂರ್ವದಲ್ಲಿ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94ಸಿಯಡಿ ಗ್ರಾಮೀಣ ಪ್ರದೇಶದ ಜನರಿಗೆ ಮತ್ತು 94ಸಿಸಿಯಡಿ ನಗರ ಪ್ರದೇಶದ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 30x40, 40x60 ಮತ್ತು 50x80 ಅಡಿ ವಿಸ್ತೀರ್ಣದ ವಾಸದ ಮನೆ ಹಾಗೂ ನಗರ ಪ್ರದೇಶದಲ್ಲಿ 20x30 ಅಡಿ ವಿಸ್ತೀರ್ಣದ ವಾಸದ ಮನೆಗಳನ್ನು ಸಕ್ರಮಗೊಳಿಸಲು ತಹಶೀಲ್ದಾರರು ಅಧಿಕಾರ ಹೊಂದಿರುತ್ತಾರೆ. ಅದರಂತೆ ತಹಶೀಲ್ದಾರರು ಕ್ರಮ ಕೈಗೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2016-17ರಲ್ಲಿ ಒಟ್ಟು 879 ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದಂತೆ 7851 ಮಂದಿಗೆ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಸರ್ವೆ ಇಲಾಖೆಯಿಂದ ಗುರುತಿಸಿ ವಿಚಾರಣೆ ಕೈಗೊಂಡು ಸಕ್ರಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸುತ್ತೋಲೆ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನರೇಗಾ ಯೋಜನೆಯಡಿ ರೂ. 1098.73 ಲಕ್ಷ

ಕೊಡಗು ಜಿಲ್ಲೆಗೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2016-17ನೇ ಸಾಲಿನಲ್ಲಿ ಒಟ್ಟು ರೂ. 1098.73 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. 2016-17ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಒಟ್ಟು ರೂ. 62.45 ಲಕ್ಷ ಬಿಡುಗಡೆಗೆ ಬಾಕಿ ಇರುತ್ತದೆ.

ಕೇಂದ್ರ ಸರಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಕಾರಣದಿಂದಾಗಿ ಪಾವತಿ ಮಾಡಲು ಸ್ವಲ್ಪ ವಿಳಂಬವಾಗಿರುತ್ತದೆ. ಈ ವಿಳಂಬವನ್ನು ತಪ್ಪಿಸಲು ಹಾಗೂ ಕಡಿಮೆ ಮಾಡುವ ಸಲುವಾಗಿ ರಾಜ್ಯ ಸರಕಾರ ನಿಗದಿತ ಪಾಲಿಗಿಂತ ಹೆಚ್ಚುವರಿಯಾಗಿ ಮುಂಗಡ ಅನುದಾನವನ್ನು ಬಿಡುಗಡೆ ಮಾಡಿದ್ದು, ಬಾಕಿ ಹಣವನ್ನು ಪಾವತಿಸಲು ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದು ಉತ್ತರಿಸಿದರು.