ಮಡಿಕೇರಿ, ಜೂ. 16: ರಾಷ್ಟ್ರಮಟ್ಟದಲ್ಲೇ ಖ್ಯಾತಿ ಪಡೆದಿರುವ ಕೊಡಗಿನ ಕಿತ್ತಳೆಯ ಖ್ಯಾತಿಯನ್ನು ಮತ್ತಷ್ಟು ಉತ್ಕøಷ್ಠಗೊಳಿಸುವ ದಿಸೆಯಲ್ಲಿ, ಕೊಡಗು ತೋಟಗಾರಿಕಾ ಇಲಾಖೆಯು ರಾಜ್ಯದ ಪ್ರಮುಖ ಹಣ್ಣುಗಳ ಸಾಲಿನಲ್ಲಿ ಈ ನಾಡಿನ ಕಿತ್ತಳೆಗೆ ಭೌಗೋಳಿಕ ಸೂಚ್ಯಂಕ ಪಟ್ಟಿಯಲ್ಲಿ ದಾಖಲಾತಿಗೊಳಿಸಿದೆ.ಕರ್ನಾಟಕದ ಪ್ರಮುಖ ಹಣ್ಣುಗಳ ಪಟ್ಟಿಯಲ್ಲಿ ಕೊಡಗಿನ ಕಿತ್ತಳೆಗೆ ಜಿಯೋಗ್ರಾಫಿಕಲ್ ಇಂಡಿಕೇಟರ್ (ಜಿ.ಐ) ಮೂಲಕ ಅದರ ಮಾರಾಟ, ಸಂರಕ್ಷಣೆ, ಶೇಖರಣಾ ಹಕ್ಕು ಕಾಯ್ದುಕೊಳ್ಳುವದರೊಂದಿಗೆ, ಪೊನ್ನಂಪೇಟೆಯಲ್ಲಿ ಈ ನಿಮಿತ್ತ ವಿಶೇಷ ಪುನಶ್ಚೇತನ ಪ್ರಚಾರ ಘಟಕ ಸ್ಥಾಪಿಸಿದೆ.

ನಂಜನಗೂಡು ರಸಬಾಳೆಯಂತೆ ಕೊಡಗಿನ ಕಿತ್ತಳೆಯು ಪ್ರಸಿದ್ಧ ಬೆಳೆಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ ಕಿತ್ತಳೆ ಸಹಿತ ಏಳು ಪ್ರಮುಖ ಫಲಗಳಗೆ ಸೂಚ್ಯಂಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಮೂಲಗಳು ಖಚಿತಪಡಿಸಿವೆ. ಒಂದೊಮ್ಮೆ ಅಪಾರ ಪ್ರಮಾಣದಲ್ಲಿ ಜಿಲ್ಲೆಯು ಕಿತ್ತಳೆ ಬೆಳೆಯುವದರೊಂದಿಗೆ, ಹೊರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದ್ದ ಕಾಲವಿತ್ತು ಮುಂದಿನ ದಿನಗಳಲ್ಲಿ ಆ ಮಾದರಿ ಕೊಡಗಿನಲ್ಲಿ ಯಥೇಚ್ಛ ಕಿತ್ತಳೆ ಬೆಳೆಗೆ ಉತ್ತೇಜನ ನೀಡುವದರೊಂದಿಗೆ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲಾ ಕ್ರಮ ಅನುಸರಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯು ಕಿತ್ತಳೆ ಬೆಳೆಗಾರರಿಗೆ ಎಲ್ಲಾ ರೀತಿ ಪ್ರೋತ್ಸಾಹದೊಂದಿಗೆ, ಅಗತ್ಯ ಸಹಾಯಧನ ಒದಗಿಸಲಿದೆ. ಅನುಭವಿ ಬೆಳೆಗಾರರಿಂದ ಆಸಕ್ತ ರೈತರಿಗೆ ಮಾಹಿತಿಯನ್ನು ಕೊಡಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ರೈತರು ತಮ್ಮ ತಮ್ಮ ತೋಟಗಳಲ್ಲಿ ಕೊಡಗಿನ ಕಿತ್ತಳೆ ಅಭಿವೃದ್ಧಿಗೊಳಿಸಲು ಮತ್ತು ಪ್ರದೇಶ ವಿಸ್ತರಣೆಗೆ ಪೂರಕವಾಗಿ ಶೇ. 30 ರಷ್ಟು ಸಹಾಯಧನದೊಂದಿಗೆ ಹನಿ ನೀರಾವರಿ,

(ಮೊದಲ ಪುಟದಿಂದ) ಔಷಧಿ, ಸಾವಯವ ಕೃಷಿಗೂ ಪ್ರೋತ್ಸಾಹ ನೀಡಲಾಗುವದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನ ಕಿತ್ತಳೆಯು ನಾಗಪುರ ಕಿತ್ತಳೆಗಿಂತಲೂ ಹೆಚ್ಚು ರುಚಿಕರ ಹಾಗೂ ಪೋಷಕಾಂಶಗಳಿಂದ ಕೂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ದಿಸೆಯಲ್ಲಿ ಬೆಳೆಗಾರರು ಕೂಡ ಹೆಚ್ಚಿನ ಆಸಕ್ತಿಯಿಂದ ಉತ್ಪಾದನೆಯತ್ತ ಕಾಳಜಿ ತೋರಬೇಕಿದೆ. ಆ ದಿಸೆಯಲ್ಲಿ ಬೆಳೆಗಾರರಿಗೆ ಕಾಲ ಕಾಲಕ್ಕೆ ಎಲ್ಲಾ ಸೌಲಭ್ಯದೊಂದಿಗೆ ತೋಟಗಾರಿಕಾ ಇಲಾಖೆಯು ಮಾರ್ಗದರ್ಶನ ಮತ್ತು ಅಗತ್ಯ ಪ್ರೋತ್ಸಾಹ ನೀಡಲು ಯೋಜನೆ ರೂಪಿಸಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.