ಮಡಿಕೇರಿ, ಜೂ. 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೌಷಧಿ (ಜನರಿಕ್) ಯೋಜನೆಯನ್ನು ರಾಜ್ಯ ಸರಕಾರದ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯಂತೆ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ನಾಲ್ಕು ಕಡೆಗಳಲ್ಲಿ ಔಷಧಿ ಮಳಿಗೆಗಳು ಪ್ರಾರಂಭಗೊಳ್ಳಲಿದೆ. ಅಮೂಲ್ಯವಾದ ಮಾನವ ಜೀವ ರಕ್ಷಕ ಔಷಧಿಗಳನ್ನು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸಿಗುವಂತೆ ಮಾಡುವದು ಈ ಯೋಜನೆಯ ಉದ್ದೇಶವಾಗಿದೆ. ಜನರಿಕ್ ಔಷಧಿ ಎಂಬ ಹೆಸರಿನಲ್ಲಿ ಅಗತ್ಯವಾದ ಜೀವರಕ್ಷಕ ಔಷಧಿಗಳು ಜನರ ಕೈ ತಲಪಲಿದೆ.

ಕೊಡಗು ಜಿಲ್ಲೆಯಲ್ಲಿ ನಾಲ್ಕು ಕಡೆಗಳಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಈ ಔಷಧಿ ಮಳಿಗೆ ಪ್ರಾರಂಭಗೊಳ್ಳಲಿದೆ. ಸರಕಾರದ ಏಜೆನ್ಸಿಯಾಗಿರುವ ಎಂಎಸ್‍ಐಎಲ್ ಸಂಸ್ಥೆ ಈ ಔಷಧಿ ವಿತರಣೆಯ ಟೆಂಡರ್ ಪಡೆದಿದ್ದು, ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆ ಹಾಗೂ ಕುಶಾಲನಗರ ಆರೋಗ್ಯ ಕೇಂದ್ರಗಳಲ್ಲಿ ಈ ಮಳಿಗೆ ಆರಂಭಗೊಳ್ಳಲಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳು ಮಾತ್ರವಲ್ಲದೆ, ಸಾರ್ವಜನಿಕರು ಸಹ ಈ ಮಳಿಗೆಯಿಂದ ಔಷಧಿ ಪಡೆದುಕೊಳ್ಳಬಹುದಾಗಿದೆ. ದಿನದ 24 ಗಂಟೆಯೂ ಈ ಸೇವೆ ಲಭ್ಯವಾಗಲಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ಶಿವಕುಮಾರ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಸ್ಥಳ ಗುರುತು ಮಾಡಲಾಗಿದ್ದು, ಜಿಲ್ಲೆಯಲ್ಲಿ ಟೆಂಡರ್ ಪಡೆದಿರುವ ಎಂಎಸ್‍ಐಎಲ್ ಮೂಲಕ ಔಷಧಿ ವಿತರಣೆ ಕಾರ್ಯ ಮುಂದಿನ ಕೆಲವು ತಿಂಗಳಲ್ಲಿ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇದನ್ನು ಹೋಬಳಿ, ಗ್ರಾಮಮಟ್ಟಕ್ಕೂ ವಿಸ್ತರಿಸುವದು ಸರಕಾರದ ಉದ್ದೇಶವಾಗಿದೆ ಎಂದು ಡಾ. ಶಿವಕುಮಾರ್ ತಿಳಿಸಿದರು.

ಏನಿದು ಜನರಿಕ್ ಔಷಧಿ?

ಪ್ರಸ್ತುತ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕಂಪೆನಿಗಳ ಮೂಲಕ ಔಷಧಿ ತಯಾರಿಸಲಾಗುತ್ತಿದ್ದು, ಇವು ಬೇರೆ ಬೇರೆ ಬ್ರ್ಯಾಂಡ್‍ನ ಮೂಲಕ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ. ಇದನ್ನು ಕಡಿಮೆ ದರದಲ್ಲಿ ಜನರಿಗೆ ಒದಗಿಸುವದು ಯೋಜನೆಯ ಉದ್ದೇಶವಾಗಿದೆ. ಉದಾಹರಣೆಗೆ ಸಾಮಾನ್ಯವಾಗಿ ಜ್ವರ ಬಂದಲ್ಲಿ ನೀಡುವದು ಪ್ಯಾರಾಸಿಟಮಲ್ ಎಂಬ ಔಷಧಿ. ಈ ಪ್ಯಾರಾಸಿಟಮಲ್ ಔಷಧಿಯನ್ನು ವಿವಿಧ ಕಂಪೆನಿಗಳು ಬೇರೆ ಬೇರೆ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುತ್ತಿದ್ದು, ಬ್ರ್ಯಾಂಡ್ ಆಧಾರದಲ್ಲಿ ಬೇರೆ ಬೇರೆ ರೀತಿಯ ದರ ಇದೆ.

ಉದಾಹರಣೆಗೆ ಕ್ರೋಸಿನ್, ಕಾಲ್‍ಫಾಲ್, ಡೋಲೋ ಇತ್ಯಾದಿ ಹೆಸರಿನ ಮಾತ್ರೆಗಳೆಲ್ಲವೂ ಪ್ಯಾರಾಸಿಟಮಲ್ ಔಷಧಿಯಾಗಿವೆ. ಹೊಸ ಯೋಜನೆಯಂತೆ ಈ ಪ್ಯಾರಾಸಿಟಮಲ್ ಮಾತ್ರೆಗಳೆಲ್ಲವೂ ಜನರಿಕ್ ಎಂಬ ಹೆಸರಿನಲ್ಲಿ ಏಕರೂಪದ ದರದಲ್ಲಿಯೇ (ಕಡಿಮೆ ಬೆಲೆ) ಜನಸಾಮಾನ್ಯರಿಗೆ ದೊರಕಲಿದೆ. ಕೇವಲ ಪ್ಯಾರಾಸಿಟಮಲ್ ಔಷಧಿ ಮಾತ್ರವಲ್ಲ ಮಾನವ ಜೀವರಕ್ಷಣೆಗೆ ಅತ್ಯಗತ್ಯವಾಗಿರುವ ಎಲ್ಲಾ ರೀತಿಯ ಔಷಧಿಗಳು ಒಂದೇ ಹೆಸರಿನಲ್ಲಿ ಹೊಸ ಔಷಧಿ ಮಳಿಗೆಯಲ್ಲಿ ಜನರಿಗೆ ಸಿಗುವಂತಾಗಲಿದೆ.