ಮಡಿಕೇರಿ, ಜೂ. 17: ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್ ಅವರನ್ನು ಕೇವಲವಾಗಿ ಪರಿಗಣಿಸಿ ಪತ್ರಿಕಾ ಹೇಳಿಕೆ ನೀಡಿದ ಕೆಲಮಂದಿ ಪಕ್ಷದ ಪ್ರಮುಖರಿಗೆ ಇಂದು ಮಾತಿನ ತಮ್ಮ ಶೈಲಿಯಲ್ಲೇ ನಯವಾಗಿ ಕುಟುಕಿದರಲ್ಲದೆ, ಜಿಲ್ಲಾ ಕೇಂದ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್ ಆಡಳಿತದ ನಗರಸಭೆಯನ್ನು ಅಲುಗಾಡಿಸಿ ತೋರಿಸಿದ್ದಾರೆ ಎನ್ನಬಹುದು.

ನಗರಸಭೆಯ ಹಿರಿಯ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮುಂದಾಳತ್ವದಲ್ಲೇ ವಿಶ್ವನಾಥ್ ವಿಶ್ವಾಸಿಗಳ ಸಭೆ ನಡೆದು, ಇಂದಿನ ಸಭೆಯಲ್ಲಿ ಭಾಗವಹಿಸಿದರೆ ಅಮಾನತುಗೊಳಿಸುವದಾಗಿ ಮುಖಂಡರು ನೀಡಿದ್ದ ಎಚ್ಚರಿಕೆಗೆ ತೀಕ್ಷ್ಣ ರೀತಿಯ ತಿರುಗೇಟು ನೀಡಿದರು.

ನಗರಸಭಾ ಆಡಳಿತ ಪಕ್ಷದ ಕೆ.ಎಂ. ಗಣೇಶ್ ಮಾತ್ರವಲ್ಲದೆ, ಹಾಲೀ ಸದಸ್ಯರೂ, ಮಾಜೀ ಅಧ್ಯಕ್ಷರುಗಳಾದ ಜುಲೇಕಾಬಿ, ಶ್ರೀಮತಿ ಬಂಗೇರ, ಮಾಜೀ ಉಪಾಧ್ಯಕ್ಷೆ ಹಾಗೂ ಹಾಲೀ ಸದಸ್ಯೆ ಲೀಲಾ ಶೇಷಮ್ಮ, ಮತ್ತೋರ್ವ ಸದಸ್ಯೆ ವೀಣಾಕ್ಷಿ ಸಭೆಯಲ್ಲಿ ಕಾಣಿಸಿಕೊಂಡರು.

‘ಮೂಡಾ' ಮಾಜೀ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ, ಸುಂಟಿಕೊಪ್ಪದ ಮಾಜೀ ಅಧ್ಯಕ್ಷ ಕರೀಂ, ಸೋಮವಾರಪೇಟೆ ಪ.ಪಂ. ಸದಸ್ಯ ಕೆ. ಆದಂ ಸೇರಿದಂತೆ ವಿವಿಧ ಗ್ರಾ.ಪಂ. ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇಂದಿನ ಬೆಳವಣಿಗೆಯನ್ನು ಗಮನಿಸಿದಾಗ, ಜಿಲ್ಲಾ ಕಾಂಗ್ರೆಸ್‍ನ ಪ್ರಬಾರ ಹೊಣೆಗಾರಿಕೆ ಹೊತ್ತವರು ಮಾಜೀ ಸಂಸದರಿಂದ ಅಧಿಕಾರ ಸ್ಥಾನ ಹೊಂದುವಂತಾಯಿತು. ತಾವು ಬೆಳೆಯುವದರೊಂದಿಗೆ ಇನ್ನೊಬ್ಬರನ್ನು ಬೆಳೆಸುವವರಾಗಿರದೆ ಅವಕಾಶವಾದಿಗಳೆಂದು ಸ್ವತಃ ವಿಶ್ವನಾಥ್ ಜರೆದರೆ, ನೈಜ ಕಾಂಗ್ರೆಸ್‍ನ ಪ್ರಾಮಾಣಿಕ ಕಾರ್ಯಕರ್ತರನ್ನು ಕೊಲ್ಲುವ ಭಯ ಕಾಡುತ್ತಿದೆ ಎಂದು ಕೆ.ಎಂ. ಗಣೇಶ್ ಕಿಡಿಕಾರಿದರು. ಮಡಿಕೇರಿ ನಗರಸಭೆ ಆಡಳಿತದ ದಿಕ್ಕು ಬದಲಾಯಿಸುವ ಸುಳಿವು ಇಂದಿನ ಸಭೆಯಿಂದ ವ್ಯಕ್ತವಾಯಿತು.

ಗರಿಗೆದರಿದ ರಾಜಕೀಯ: ಮಾಜೀ ಸಂಸದರ ಭೇಟಿ ಬೆನ್ನಲ್ಲೇ ನಗರಸಭೆ ಆಡಳಿತದಲ್ಲಿ ಬದಲಾವಣೆಯ ರಾಜಕೀಯ ಗಾಳಿ ಬೀಸುವದರೊಂದಿಗೆ ಗರಿಗೆದರಿದ ಚಟುವಟಿಕೆ ತೆರೆಮರೆಯಲ್ಲಿ ನಡೆಯುವಂತಾಗಿದೆ.

ಹತ್ತು ಮಂದಿ ಸದಸ್ಯ ಬಲದ ನಗರಸಭೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯಲು ಮಾಜೀ ಸಂಸದರು ಕಾರಣರಾಗಿದ್ದರು. ಹಾಗಾಗಿ ಹಿಂದಿನ ಅವಧಿಯ

(ಮೊದಲ ಪುಟದಿಂದ) ಇಬ್ಬರು ಅಧ್ಯಕ್ಷರು ಇಂದು ವಿಶ್ವಾಸಿಗಳ ಸಭೆಯಲ್ಲಿ ಪಾಲ್ಗೊಂಡಿದ್ದು, ಕೆ.ಎಂ. ಗಣೇಶ್ ಮುಂದಾಳತ್ವದಲ್ಲಿ ಪರ್ಯಾಯ ವ್ಯವಸ್ಥೆಯ ಸಂದೇಶ ರವಾನೆಯಾದಂತಿತ್ತು.

ಹೀಗಾಗಿ ಹತ್ತು ಸದಸ್ಯರ ಪೈಕಿ ಐವರು ಪ್ರತ್ಯೇಕಗೊಂಡು ಬಿಜೆಪಿ ಹಾಗೂ ಇತರರ ಮಿತ್ರಕೂಟದ ಹೊಸ ಆಡಳಿತ ವ್ಯವಸ್ಥೆಯ ಪಿಸುಮಾತುಗಳು ತೇಲಿಬಂದವು. ಒಟ್ಟಿನಲ್ಲಿ ಅಡಗೂರು ವಿಶ್ವನಾಥ್ ವಿಶ್ವಾಸಿಗಳ ಸಭೆ ಒಂದು ರೀತಿಯಲ್ಲಿ ನಗರಸಭೆಯ ಆಡಳಿತವನ್ನೇ ಅಲುಗಾಡಿಸಿದಂತೆ ಕಂಡುಬಂದರೂ ಕೂಡ, ಈ ಬಗ್ಗೆ ಮಾಜೀ ಸಂಸದ ವಿಶ್ವನಾಥ್ ಹಾಗೂ ಕೆ.ಎಂ. ಗಣೇಶ್ ಬಳಗ ತಮ್ಮ ರಾಜಕೀಯ ತಂತ್ರಗಾರಿಕೆಯ ರಹಸ್ಯವನ್ನು ಗೌಪ್ಯವಾಗಿರಿಸಿಕೊಂಡಂತೆ ಭಾಸವಾಯಿತು.

-ಶ್ರೀಸುತ.