ಮಡಿಕೇರಿ. ಜೂ. 16 : ಕಾಂಗ್ರೆಸ್ ಪಕ್ಷಕ್ಕೆ ಎಷ್ಟೋ ಜನರು ಬಂದಿದ್ದಾರೆ, ಪಕ್ಷದಿಂದ ಹೊರ ಹೋಗಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಇಂದಿಗೂ ಜೀವಂತವಾಗಿದ್ದು, ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲವೆಂದು ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಹೆಚ್. ವಿಶ್ವನಾಥ್ ಕೊಡಗಿನ ಎಲ್ಲಾ ಕಾಂಗ್ರೆಸ್ಸಿಗರಿಗೆ ಆತ್ಮೀಯರಾಗಿದ್ದಾರೆ. ಪಕ್ಷ ಬಿಡಬಾರದೆಂದು ಮನವಿ ಮಾಡಿಕೊಂಡು ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಅವರಿಂದ ಪೂರಕ ಪ್ರತಿಕ್ರಿಯೆ ದೊರೆಯಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ತಾ. 17 ರಂದು (ಇಂದು) ನಗರದಲ್ಲಿ ವಿಶ್ವನಾಥ್ ಅವರ ಹಿತೈಷಿಗಳ ಸಭೆÉ ನಡೆಯುತ್ತದೆ ಎನ್ನುವ ಮಾಹಿತಿ ಪತ್ರಿಕೆಗಳಿಂದಷ್ಟೆ ತಿಳಿದು ಬಂದಿದೆ. ಅವರ ಆಗಮನದ ಬಗ್ಗೆ ಪಕ್ಷಕ್ಕೆ ಅಧಿಕೃತ ಮಾಹಿತಿ ಇಲ್ಲ. ಅವರು ಹಿತೈಷಿಗಳ ಸಭೆ

ಕರೆದಿರುವದರಿಂದ ಹಿತೈಷಿಗಳಷ್ಟೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲವೆಂದು ಸಮಜಾಯಿಷಿಕೆ ನೀಡಿದ ರಮೇಶ್, ಕಾಂಗ್ರೆಸ್ ನಡಾವಳಿಕೆಗಳಿಗೆ ವಿರುದ್ಧವಾಗಿ ಸಭೆ ನಡೆದರೆ ಅದನ್ನು ಕಾಂಗ್ರೆಸ್ ವಿರೋಧಿ ಸಭೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು. ಯಾವದಕ್ಕೂ ಜಿಲ್ಲಾ ಕಾಂಗ್ರೆಸ್ ಕಾದು ನೋಡುವ ಕ್ರಮವನ್ನು ಅನುಸರಿಸಲಿದೆ ಎಂದರು.

ನಗರಸಭಾ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಎಂ. ಗಣೇಶ್ ಅವರು ನಗರಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಎಚ್ಚರಿಕೆಯನ್ನು ನೀಡಿದ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಅದನ್ನು ಬಿಟ್ಟು ಇನ್ನೊಬ್ಬರ ವಿರುದ್ಧ ಬೆರಳು ತೋರಿಸುವದು, ಉದ್ಧಟತನದಿಂದ ಮಾತನಾಡುವದು ಸರಿಯಲ್ಲ. ಕೆ.ಎಂ.ಗಣೇಶ್ ಅವರಿಗೆ ನೋಟಿಸ್ ನೀಡಲಾಗುವದು ಎಂದರು.

ವಾಟ್ಸ್‍ಗ್ರೂಪ್ ವಿರುದ್ಧ ಕ್ರಮ

ಇತ್ತೀಚೆಗೆ ಕೆಲವರು ವಾಟ್ಸ್‍ಗ್ರೂಪ್ ರಚಿಸಿಕೊಂಡು ಎಂ.ಎಲ್.ಎ. ಗಳನ್ನು ಸೃಷ್ಟಿ ಮಾಡುವದು, ನಾಯಕರೆಂದು ಪ್ರತಿಬಿಂಬಿಸುವದು, ಕೆಲವರ ತೇಜೋವಧೆಯಲ್ಲಿ ತೊಡಗಿರುವದು ಕಂಡು ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಈ ರೀತಿಯ ಚಟುವಟಿಕೆಯಲ್ಲಿ ತೊಡಗಿದರೆ ಅಂತಹವರÀ ವಿರುದ್ಧ ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಮಹಿಳಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಸಮಾವೇಶ ನಡೆಸಲಾಗುವದೆಂದು ಟಿ.ಪಿ.ರಮೇಶ್ ತಿಳಿಸಿದರು.

ಮುಂದಿನ 15 ದಿನಗಳ ಒಳಗೆ ಬ್ಲಾಕ್ ಮತ್ತು ಮುಂಚೂಣಿ ಘಟಕಗಳ ಎಲ್ಲಾ ಸಮಿತಿಗಳನ್ನು ರಚಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಎಐಸಿಸಿ ವೀಕ್ಷಕರು ಸದ್ಯದಲ್ಲಿಯೇ ಭೇಟಿ ನೀಡಿ ಪಕ್ಷದ ಕಾರ್ಯಚಟುವಟಿಕೆ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನೆÉರವಂಡ ಉಮೇಶ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನ ಉಪಸ್ಥಿತರಿದ್ದರು.