ಮಡಿಕೇರಿ, ಜೂ. 17: ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಬಾಳೆ ಹೀಗೆ ಪ್ರಮುಖ ವಾಣಿಜ್ಯ ಬೆಳೆಗಳ ಜೊತೆಗೆ ಭತ್ತ, ಮುಸುಕಿನ ಜೋಳ ಕೃಷಿ ಬೆಳೆಗಳಾಗಿವೆ.

ಕೃಷಿ ಪ್ರಧಾನಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೆಲವು ಪ್ರದೇಶಗಳಲ್ಲಿ ರೈತರು ಸಾವಿರ ಅಡಿವರೆಗೂ ಕೊಳವೆ ಬಾವಿ ಕೊರೆಸಲು ರೂ. 2 ಲಕ್ಷದವರೆಗೆ ವೆಚ್ಚ ಮಾಡುತ್ತಾರೆ. ಆದರೆ ಕೆಲವು ಕೊಳವೆ ಬಾವಿಗಳು ವಿಫಲವಾಗುತ್ತವೆ. ಕೆಲವು ವರ್ಷಗಳ ನಂತರ ಬತ್ತಿ ಹೋಗುವ ಸಾಧ್ಯತೆಯೂ ಹೆಚ್ಚಿದೆ. ಇದರಿಂದ ರೈತರು ಸಾಲಬಾಧೆಗೆ ಸಿಲುಕಿ ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವದನ್ನು ಕಾಣುತ್ತಿದ್ದೇವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಿ ಸುಸ್ಥಿರ ಕೃಷಿ ಮಾಡಲು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದೆ.

ಮಳೆಯಾಶ್ರಿತ ರೈತರ ಜೀವನಮಟ್ಟ ಉತ್ತಮ ಪಡಿಸುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಯನ್ನು 2014-15ನೇ ಸಾಲಿನಲ್ಲಿ ಸರ್ಕಾರ ಜಾರಿಗೊಳಿಸಿದ್ದು, ಪ್ರಸಕ್ತ ವರ್ಷದಿಂದ ಕೊಡಗು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದೆ. ಕೃಷಿಭಾಗ್ಯ ಯೋಜನೆ ಪ್ರದೇಶಗಳಲ್ಲಿ ರೈತರ ಬೆಳೆಗಳಿಗಾಗಿ ಲಭ್ಯವಾದ ನೀರಿನ ಪ್ರಮಾಣವನ್ನು ಮಳೆ ನೀರು ಸಂಗ್ರಹಣೆ ಮುಖಾಂತರ ಹೆಚ್ಚಿಸಿ ಆಯಾಯ ವಲಯಗಳಲ್ಲಿ ಸುಸ್ಥಿರ ಕೃಷಿ ಉತ್ತೇಜಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವದು ಮತ್ತು ಆದಾಯವನ್ನು ಹೆಚ್ಚಿಸುವದು, ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವದು ಕೃಷಿಭಾಗ್ಯ ಯೋಜನೆಯ ಉದ್ದೇಶವಾಗಿದೆ.

ಕೃಷಿ ಹೊಂಡದಿಂದ ನೀರು ತೆಗೆಯಲು ಡೀಸೆಲ್/ಸೋಲಾರ್ ಪಂಪ್‍ಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಹನಿ/ತುಂತುರು ನೀರಾವರಿ ಬಳಸುವದು. ಕೃಷಿ ಹೊಂಡದ ಸುತ್ತಲು ನೆರಳು ಪರದೆ, ಬದು ನಿರ್ಮಾಣ ಕಾಮಗಾರಿಯನ್ನು ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಯಡಿ ಕೈಗೊಳ್ಳಬಹುದಾಗಿದೆ. ಮಳೆ ನೀರು ಸಂಗ್ರಹಿಸಲು ಕೃಷಿ ಹೊಂಡ, ಮಳೆ ನೀರು ಸಂಗ್ರಹಣೆಗೆ ಎಲ್ಲಾ ರೀತಿಯ ಮಣ್ಣುಗಳಲ್ಲಿ ರಚನೆಗೆ ಅನುಕೂಲವಾಗಿದ್ದು, ಉಪಚರಿಸಲ್ಪಟ್ಟ ಕೃಷಿ ಯೋಗ್ಯ ಜಮೀನಿನಿಂದ ದಾರಿಗಳಲ್ಲಿ ಹರಿಯುವ ಹೆಚ್ಚುವರಿ ಮಳೆ ನೀರನ್ನು ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ತೆಗೆದು ಜಲಸಂಗ್ರಹಣೆ ಮಾಡಬಹುದಾಗಿದೆ.

ಆ ದಿಸೆಯಲ್ಲಿ ಪ್ರಸಕ್ತ ಸಾಲಿನಿಂದ ಕೃಷಿ ಇಲಾಖೆಯಿಂದ ಕೃಷಿಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರೈತರಿಗೆ ನೀರಿನ ಸಂರಕ್ಷಣೆ ಮಾಡಿ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ಬಳಸಲು ರಿಯಾಯಿತಿ ದರದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡಲಾಗುತ್ತದೆ. ಕೃಷಿ ಹೊಂಡದಿಂದ ನೀರೆತ್ತಲು 5 ಹೆಚ್.ಪಿ. ಡೀಸೆಲ್ ಪಂಪ್‍ಸೆಟ್ ಮತ್ತು ಬೆಳೆಗಳಿಗೆ ಮಿತವಾಗಿ ನೀರುಣಿಸಲು ತುಂತುರು ನೀರಾವರಿ ಘಟಕಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.

ಅವಶ್ಯವಿರುವ ರೈತರು ಕೃಷಿ ಇಲಾಖಾ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ, ಅರ್ಜಿಯನ್ನು ಅವಶ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ ತಿಳಿಸಿದ್ದಾರೆ.