*ಗೋಣಿಕೊಪ್ಪಲು, ಜೂ. 17: ಒಬ್ಬರು ನೆಟ್ಟ ಗಿಡಗಳನ್ನು ಮತ್ತೊಬ್ಬರಿಗೆ ಕಡಿಯುವ ಹಕ್ಕಿಲ್ಲ. ಮರಗಳ ಮಾರಣ ಹೋಮದಿಂದ ಕಾವೇರಿ ಒಡಲು ಬರಿದಾಗುತ್ತಿದೆ. ಇದರಿಂದ ಕೊಡಗಿನ ಪರಿಸರವೂ ಬದಲಾಗುತ್ತಿದೆ ಎಂದು ಸಮಗ್ರ ಮಾಹಿತಿ ಮಾನವ ಹಕ್ಕಿನ ಭ್ರಷ್ಟಾಚಾರ ವಿರೋಧಿ ಟ್ರಸ್ಟ್ ರಾಜ್ಯಾಧ್ಯಕ್ಷ ದೇವರಾಜ್ ಪಟೇಲ್ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಧ್ಯಕ್ಷ ಬಾಲಕೃಷ್ಣ ಸಂಗಾಪುರ ಮಾತನಾಡಿ, ಪ್ರತಿಯೊಂದು ಮನೆಯಲ್ಲೂ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕು. ಗಿಡ-ಮರಗಳಿದ್ದರೆ ಪರಿಸರ ಕೆಡುವದಿಲ್ಲ. ಹಸಿರೇ ಉಸಿರು. ಮರಗಳು ತಂಪು ನೀಡುವದರ ಜತೆಗೆ ಪರಿಸರಕ್ಕೆ ತಂಪು ನೀಡುತ್ತವೆ ಎಂದು ಹೇಳಿದರು.

ಪ್ರಬಾರ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಮಾನವ ಮತ್ತು ಪರಿಸರದ ನಡುವಿನ ಸಂಬಂಧ ತಾಯಿ ಮಗುವಿನಂತಿರಬೇಕು ಎಂದರು.

ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್ ಮಾತನಾಡಿ, ಸಾರ್ವಜನಿಕ ಹಣ ಅಂಗೈಯಲ್ಲಿನ ಜೇನಿನಂತೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಲವು ಕಾನೂನುಗಳು ಬಂದರೂ ಕೂಡ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಪರಿಸರ ಎಲ್ಲ ಜೀವಿಗಳಿಗೂ ಸೇರಿದ್ದು. ಮನುಷ್ಯ ತಾನೂ ಬದುಕಿ ಇತರ ಜೀವಿಗಳನ್ನು ಬದಕುಲು ಬಿಡಬೇಕು ಎಂದು ಹೇಳಿದರು.

ಟ್ರಸ್ಟ್ ಪದಾಧಿಕಾರಿಗಳಾದ ಶಿವಪ್ಪ ಹಾಲುಮತ, ಹ್ಯಾರೀಶ್, ಇಂದ್ರೇಶ್, ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತೀತಿರ ಚೋಂದಮ್ಮ, ಪುರುಷ ಘಟಕದ ಅಧ್ಯಕ್ಷ ಗಿರೀಶ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಡ್ಯಮಾಡ ಅನಿತಾ, ಉಪಾಧ್ಯಕ್ಷ ಪವನ್ ಚಿಟ್ಟಿಯಪ್ಪ, ಆರ್‍ಎಂಸಿ ಸದಸ್ಯ ಆದೇಂಗಡ ವಿನು ಚಂಗಪ್ಪ ಹಾಜರಿದ್ದರು.

ನಿಟ್ಟೂರಿನ ನಾಟಿ ವೈದ್ಯ ದೇರಪಂಡ ಗಣಪತಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಾಲೇಜಿನ ಪಿ.ಹೆಚ್. ಆಸಿಫ, 10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹೆಚ್.ಎಸ್. ಅನುಷಾ ಅವರನ್ನು ಸನ್ಮಾನಿಸಲಾಯಿತು.

ಅಧ್ಯಾಪಕರಾದ ರಾಘವೇಂದ್ರ ಸ್ವಾಗತಿಸಿ, ಸುಬ್ಬಯ್ಯ ನಿರೂಪಿಸಿ, ಪ್ರತಿಭಾ ಉತ್ತಪ್ಪ ವಂದಿಸಿದರು.