ಮಡಿಕೇರಿ, ಜೂ. 17: ಮಂಜಿನ ನಗರಿ ಎಂದೇ ಕರೆಯಲ್ಪಡುವ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಎಲ್ಲೆಡೆ ಕನ್ನಡದ ಕಂಪು ಪಸರಿಸಿತು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೇರಿದ್ದ ಕನ್ನಡ ಮನಸ್ಸುಗಳಲ್ಲಿ ಕನ್ನಡ ತಾಯಿ ಆರಾಧಿಸಲ್ಪಟ್ಟಳು.ಸಮ್ಮೇಳನದ ಪ್ರಯುಕ್ತ ಐತಿಹಾಸಿಕ ಕೋಟೆ ಆವರಣದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಸಮಾರಂಭ ಏರ್ಪಾಡಾಗಿದ್ದ ಕಾವೇರಿ ಕಲಾ ಕ್ಷೇತ್ರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕಳಸ ಹೊತ್ತ ಮಹಿಳೆಯರು, ಕೊಡಗಿನ ವಾಲಗ, ಡೊಳ್ಳುಕುಣಿತ, ಪಟ್ಟದ ಕುಣಿತ, ತೆರೆಕುಣಿತ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೂ ಭಾಗವಹಿಸಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಡೋಲು ಬಾರಿಸುವ ಮೂಲಕ ಕೋಟೆ ಆವರಣದಲ್ಲಿ ಚಾಲನೆ ನೀಡಿದರಲ್ಲದೆ, ಪ್ರತಿಯೊಬ್ಬರು ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಕರೆಕೊಟ್ಟರು. ತೆರೆದ ಜೀಪಿನಲ್ಲಿ ಸಮ್ಮೇಳನಾಧ್ಯಕ್ಷರಾದ ಬಿ.ಎ. ಷಂಶುದ್ದೀನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಇದ್ದರು.

ಹರಸಿದ ಮಳೆರಾಯ!

ಕೊಡಗಿನಲ್ಲಿ ಮಳೆಗಾಲ ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಮಳೆಯು ಮಳೆಗಾಲ ಪೂರ್ಣವಾಗುವವರೆಗೂ ಆರ್ಭಟಿಸುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ

(ಮೊದಲ ಪುಟದಿಂದ) ಹೊರಾಂಗಣ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಮಳೆರಾಯನಿಂದ ಅಡ್ಡಿಯಾಗುವದು ಖಚಿತ. ಆದರೆ.., ದಿನಂಪ್ರತಿ ಬೆಳಗ್ಗಿನಿಂದಲೇ ಧೋ... ಎಂದು ಮಂಜಿನ ನಗರಿಯಲ್ಲಿ ಸುರಿಯುತ್ತಿದ್ದ ಮಳೆ ಇಂದು ಮಾತ್ರ ಬಿಡುವು ನೀಡಿದ್ದ! ಹೌದು ಇದೇ ರೀತಿ ಬೆಳಗ್ಗೆ ಮಳೆ ಇದ್ದರೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೇಗಪ್ಪಾ...? ಎಂದು ಚಿಂತಾಕ್ರಾಂತರಾಗಿದ್ದ ಕಸಾಪ ಪದಾಧಿಕಾರಿಗಳು, ಸದಸ್ಯರಿಗೆ ಮಳೆರಾಯ ಇಂದು ಕೈ ಹಿಡಿದ. ಕನ್ನಡಮ್ಮನ ಆರಾಧನೆಗೆ ಮಳೆರಾಯನು ಹರಸಿದ. ಪರಿಣಾಮ ಮೆರವಣಿಗೆ ನಗರ ವ್ಯಾಪ್ತಿಯಲ್ಲಿ ಸಾಂಗವಾಗಿ ನಡೆಯಿತು.

ಕಾವೇರಿ ಕಲಾಕ್ಷೇತ್ರ ತಲುಪುತ್ತಿದ್ದಂತೆ ಬಿ.ಎಸ್. ಗೋಪಾಲಕೃಷ್ಣ ಮಹಾದ್ವಾರವನ್ನು ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಭಾರತೀಸುತ ಪುಸ್ತಕ ಮಳಿಗೆಯನ್ನು ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಉದ್ಘಾಟಿಸಿದರು. ಎದುರ್ಕಳ ಶಂಕರನಾರಾಯಣ ಭಟ್ ಸಭಾಂಗಣವನ್ನು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿದೇವಯ್ಯ, ಅಂಬಳೆ ಸುಬ್ಬರಾವ್ ವೇದಿಕೆಯನ್ನು ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಂಡದವರು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳಿಂದ ಕಾರ್ಯಕ್ರಮದ ವೇದಿಕೆಯಲ್ಲಿ ಕಲಾ ಪ್ರದರ್ಶನ ನಡೆಯಿತು.