ಮಡಿಕೇರಿ, ಜೂ. 16: ಕೊನೆಗೂ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೆ. ನಿಡುಗಣೆ, ಹೆಬ್ಬೆಟ್ಟಗೇರಿ, ದೇವಸ್ತೂರು, ಮಾಂದಲಪಟ್ಟಿ ಮುಖಾಂತರ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ಗ್ರಾಮಗಳನ್ನು ಹಾದು ಸೂರ್ಲಬ್ಬಿ, ಶಾಂತಳ್ಳಿ ಮೂಲಕ ಸೋಮವಾರ ಪೇಟೆಗೆ ಸಂಪರ್ಕ ಸಾಧಿಸುವ ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ.

ಮೇಲಿನ ಕುಗ್ರಾಮಗಳನ್ನು ಹಾದು ಹೋಗಲಿರುವ ಈ ರಸ್ತೆಯು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡಿದೆ. ಈ ಮಾರ್ಗದ 13ನೇ ಕಿ.ಮೀ. ದೂರದಲ್ಲಿರುವ ಹೊಳೆಯಿಂದಾಗಿ, ಸ್ವಾತಂತ್ರ್ಯ ಭಾರತದ 65 ವರ್ಷಗಳಲ್ಲಿ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಗರ್ವಾಲೆ, ಮಾದಾಪುರ ಮಾರ್ಗವಾಗಿ 40 ಕಿ.ಮೀ. ಬಳಸಿ ನಿತ್ಯ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದರು. ಪ್ರಸಕ್ತ ಭಾರತ ಸರಕಾರದ ನೆರವಿನೊಂದಿಗೆ ರೂ. 215.74 ಲಕ್ಷ ವೆಚ್ಚದಲ್ಲಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದ ಹೊಳೆಗೆ ಅಡ್ಡಲಾಗಿ ಉತ್ತಮ ಸೇತುವೆ ನಿರ್ಮಾಣದೊಂದಿಗೆ ಕಾಮಗಾರಿ ಮುಗಿದಿದೆ. 0.02 ಕಿ.ಮೀ. ಸೇತುವೆಯನ್ನು 15 ರಿಂದ 20 ಅಡಿ ಎತ್ತರಿಸಿ ನಿರ್ಮಿಸಿರುವ ಕಾರಣ, ಮಳೆಗಾಲದಲ್ಲಿ ಕಷ್ಟಕ್ಕೆ ಸಿಲುಕುತ್ತಿದ್ದ ಗ್ರಾಮೀಣ ಜನತೆಯ ಮೊಗದಲ್ಲಿ ನಗು ಕಾಣುವಂತಾಗಿದೆ. ಗ್ರಾಮೀಣ ಜನತೆಯ ಕನಸು ಸಾಕಾರಗೊಳ್ಳುವಲ್ಲಿ ಈ ರಸ್ತೆಯೊಂದಿಗೆ ಸೇತುವೆ ನಿರ್ಮಾಣಕ್ಕೆ ಶಾಸಕದ್ವಯ ರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಕಾಳಜಿ ತೋರಿದ್ದರಿಂದ ಸಾಧ್ಯವಾಗಿದೆ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲಸ ಪೂರೈಸುವಲ್ಲಿ ಗಮನ ಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ರಾಜ್ಯ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಈ ಭಾಗದ ಜನತೆ ಬೇಡಿಕೆ ಮುಂದಿಟ್ಟಿ ದ್ದಾರೆ. ಇತ್ತ ಜಿಲ್ಲಾಡಳಿತ ಹಾಗೂ ಮಡಿಕೇರಿ ಸಾರಿಗೆ ಘಟಕದೊಂದಿಗೆ ಸಂಬಂಧಪಟ್ಟವರು ಆಸಕ್ತಿ ತೋರಲೆಂದು ‘ಶಕ್ತಿ’ ಮೂಲಕ ಗ್ರಾಮಸ್ಥರ ಆಶಯವಾಗಿದೆ. - ಶ್ರೀಸುತ