ಸಿದ್ದಾಪುರ, ಜೂ. 17: ಮಹಿಳೆಯರಿಗೆ ಕಾನೂನಿನ ಅರಿವು ಅತ್ಯಗತ್ಯವೆಂದು ವೀರಾಜಪೇಟೆ ವಕೀಲರ ಸಂಘದ ಉಪಾಧ್ಯಕ್ಷ ಹಾಗೂ ನೋಟರಿ ಎಂ.ಎಸ್. ವೆಂಕಟೇಶ್ ಕಿವಿಮಾತು ಹೇಳಿದರು. ಜಿಲ್ಲಾ ಓ.ಡಿ.ಪಿ. ಮಹಿಳಾ ಸಂಘಟನೆಯ ವತಿಯಿಂದ ಸಿದ್ದಾಪುರ ಪಂಚಾಯಿತಿ ಸಭಾಂಗಣದಲ್ಲಿ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಕಾನೂನು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಕಾನೂನಿನ ಬಗ್ಗೆ ಅರಿತುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಅಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರಿಗೆ ಮತದಾನವನ್ನು ನಿಷೇಧಿಸಿದ್ದು ನಂತರ ಗಾಂಧೀಜಿಯವರ ಪ್ರಯತ್ನದಿಂದಾಗಿ ಸಮಾನ ಮತದಾನ ಹಕ್ಕು ನೀಡಿದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಕಾರ್ಯಾಗಾರದಲ್ಲಿ ಮಹಿಳೆಯರು ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ವಕೀಲರೊಂದಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಾಗಾರದಲ್ಲಿ ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ. ವಿಶ್ವನಾಥ್ ಮಾತನಾಡಿದರು. ಕಾರ್ಯಾಗಾರದಲ್ಲಿ ಓ.ಡಿ.ಪಿ. ಸಂಘದ ಪದಾಧಿಕಾರಿಗಳಾದ ಎಂ.ಆರ್. ಪೂವಮ್ಮ, ಪ್ರೇಮ, ಪುಷ್ಪ ಇನ್ನಿತರರು ಹಾಜರಿದ್ದರು.