ಮಡಿಕೇರಿ, ಜೂ. 16: ತಲಾತಲಾಂತರದಿಂದ ನಡೆದಾಡುತ್ತಿರುವ ರಸ್ತೆಗೆ ತಾಮರ ರೆಸಾರ್ಟ್‍ನವರು ಬೇಲಿ ಅಳವಡಿಸಿ ಯವಕಪಾಡಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಕೆರೆಕಟ್ಟು ಕಾಲೋನಿಯ ಮನೆಗಳಿಗೆ ತೆರಳಲು ರಸ್ತೆ ಇಲ್ಲದಂತಾಗಿದೆ; ಈ ರಸ್ತೆಯನ್ನು ತೆರವುಗೊಳಿಸಿ ಎಂದು ಕಾವೇರಿಸೇನೆ ಹಾಗೂ ಯವಕಪಾಡಿ ಗ್ರಾಮದ ಸತ್ಯಾನ್ವೇಷಣೆ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದೆದುರು ಅಹೋರಾತ್ರಿ ಧರಣಿ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಡಿಯ ಜನಾಂಗದವರು, ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಹಾಗೂ ಸತ್ಯಾನ್ವೇಷಣಾ ಸಮಿತಿ ಅಧ್ಯಕ್ಷ ಕೇಟೋಳಿರ ಸನ್ನಿ ಸೋಮಣ್ಣ ನೇತೃತ್ವದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ರಸ್ತೆ ತೆರವಿಗೆ ಆಗ್ರಹಿಸಿ ಕಳೆದ 20 ದಿನಗಳ ಹಿಂದೆ ರೆಸಾರ್ಟ್ ಗೇಟ್ ಬಳಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿತ್ತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಅಧಿಕಾರಿ ಕ್ರಮದ ಭರವಸೆ ನೀಡಿದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಅಡಿಯ ಜನಾಂಗದವರಿಗೆ ನಡೆದಾಡಲು ರಸ್ತೆ ಇಲ್ಲದಂತಾಗಿದೆ. ರೆಸಾರ್ಟ್‍ನವರು ನಿತ್ಯ ಕಿರುಕುಳ, ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

(ಮೊದಲ ಪುಟದಿಂದ) ರಸ್ತೆಗೆ ಅಳವಡಿಸಿದ ಬೇಲಿಯನ್ನು ತೆರವುಗೊಳಿಸುವವರೆಗೆ ಇಲ್ಲಿಂದ ಕದಲುವದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ರಸ್ತೆ ಸಮಸ್ಯೆ ಬಗ್ಗೆ ತಿಳಿದು ಬಂದಿತ್ತು. ಸಮಸ್ಯೆ ಪರಿಹಾರ ಕಂಡಿರ ಬಹುದೆಂದು ತಿಳಿದುಕೊಂಡಿದ್ದೆ. ಈಗಿನ ಬೆಳವಣಿಗೆ ತಿಳಿದಿಲ್ಲ. ಕಂದಾಯ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ಪರಿಹರಿಸುವದಾಗಿ ಹೇಳಿದರು.

ಭರವಸೆ ಈಗಲೇ ಈಡೇರಬೇಕು, ಇಲ್ಲದಿದ್ದಲ್ಲಿ ಇಲ್ಲಿಯೇ ಧರಣಿ ಕುಳಿತುಕೊಳ್ಳುವದಾಗಿ ಹೇಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಯೇ ಧರಣಿಗೆ ಕುಳಿತರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ನಗರ ವೃತ್ತ ನಿರೀಕ್ಷಕ ಮೇದಪ್ಪ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಧರಣಿ ನಿರತರನ್ನು ಸಮಾಧಾನಪಡಿಸಿ ಜಿಲ್ಲಾಡಳಿತ ಭವನದೆದುರಿಗೆ ಕಳುಹಿಸುವದಲ್ಲಿ ಸಫಲರಾದರು.

ಮುಂದುವರೆದ ಧರಣಿ

ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾಡಳಿತ ಭವನದೆದುರು ಆಗಮಿಸಿದ ಧರಣಿ ನಿರತರು ತಕ್ಷಣ ರಸ್ತೆ ಬೇಲಿ ತೆರವುಗೊಳಿಸುವಂತೆ ಆಗ್ರಹಿಸಿ ಘೋಷಣೆ ಕೂಗುತ್ತಾ ತಡರಾತ್ರಿವರೆಗೂ ಧರಣಿ ಮುಂದುವರೆಸಿದರು. ಈ ಸಂದರ್ಭ ರವಿಚಂಗಪ್ಪ ಹಾಗೂ ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಅಡಿಯ ಜನಾಂಗದವರು 600 ವರ್ಷಗಳ ಇತಿಹಾಸ ಹೊಂದಿದ್ದಾರೆ. ಅವರು ನಡೆದಾಡುವ ರಸ್ತೆಗೆ ಬೇಲಿ ನಿರ್ಮಿಸಿ ತಡೆ ಒಡ್ಡಲಾಗಿದೆ. ರಸ್ತೆ ಬೇಲಿ ತೆರವುಗೊಳಿಸುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಪ್ರತಿಕ್ರಿಯಿಸಿ ನಕ್ಷೆಯಲ್ಲಿ ಬೇರೆ ದಾರಿ ತೋರಿಸಲಾಗಿದೆ. ಕಂದಾಯ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ತಾತ್ಕಾಲಿಕವಾಗಿ ರಸ್ತೆ, ಬೇಲಿ ತೆರವುಗೊಳಿಸಿ ಕಾಲೋನಿ ನಿವಾಸಿಗಳಿಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರೆಸಾರ್ಟ್‍ನವರಲ್ಲಿ ಕೇಳಿಕೊಳ್ಳಲಾಗಿದೆ. ಈಗಿನ ಬೆಳವಣಿಗೆ ತಿಳಿದಿಲ್ಲ. ಅಧಿಕಾರಿಗಳ್ನು ಕಳುಹಿಸಿ ರಸ್ತೆ ಬೇಲಿ ತೆರವುಗೊಳಿಸುವದಾಗಿ ಹೇಳಿದರು.