ಶ್ರೀಮಂಗಲ, ಜೂ. 16: ರೈತರ ಸಾಲ ಮನ್ನಾಕ್ಕೆ ವಿನಿಯೋಗಿಸುವ ಹಣ ನೇರವಾಗಿ ಬ್ಯಾಂಕ್‍ಗಳ ಮೂಲಕ ಫಲಾನುಭವಿ ರೈತರಿಗೆ ತಲುಪುತ್ತದೆ. ಇದರಲ್ಲಿ ಇತರ ಕಾಮಗಾರಿಗಳಿಗೆ ಸಿಗುವಂತೆ ಕಮಿಷನ್ ಹಾಗೂ ಹಣ ಕೊಳ್ಳೆಹೊಡೆಯಲು ಜನಪ್ರತಿನಿಧಿಗಳಿಗೆ ಅವಕಾಶ ಇಲ್ಲದಿರುವದರಿಂದ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿರುವ ಸಂಸದರು, ಶಾಸಕರುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟದ ಗೌರವಾಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಲೇವಡಿ ಮಾಡಿದ್ದಾರೆ.

ಅವರು ಶ್ರೀಮಂಗಲ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ, ಶ್ರೀಮಂಗಲ ರೈತ ಸಂಪರ್ಕ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಬೆಳೆ ವಿಚಾರ ಸಂಕಿರಣ ಹಾಗೂ ಹೋಬಳಿ ಮಟ್ಟದ ಬೀಜೋಪಚಾರ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

(ಮೊದಲ ಪುಟದಿಂದ) ಸಂಸದರು ಮತ್ತು ಶಾಸಕರುಗಳು ತಮ್ಮ ವೇತನ ಹಾಗೂ ಭತ್ಯೆ ಹೆಚ್ಚಿಸಿಕೊಳ್ಳಲು ವಹಿಸಿದ ಮುತುವರ್ಜಿಯನ್ನು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮತ್ತು ಫಸಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವತ್ತ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದÀರು. 10 ವರ್ಷ ಪೂರ್ವನ್ವಯವಾಗುವಂತೆ ಕೃಷಿ-ತೋಟಗಾರಿಕಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದ್ದಲ್ಲಿ ಸಾಲ ಮನ್ನಾಕ್ಕೆ ಬೇಡಿಕೊಳ್ಳುವ ಅವಶ್ಯಕತೆ ರೈತ ಸಮುದಾಯಕ್ಕೆ ಇಲ್ಲ ಎಂದು ಕಿಡಿಕಾರಿದರು. ಸರಕಾರದ ವತಿಯಿಂದ ಇಂತಹ ಯಾವದೇ ಕೃಷಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವದರಿಂದ ಪ್ರಯೋಜನವಿಲ್ಲ. ರೈತರ ಬೆಳಿಗ್ಗೆ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ಸಂಕಷ್ಟದಿಂದ ಹೊರಬರಲು ಸಾಧ್ಯ ಎಂದು ಶಂಕರು ನಾಚಪ್ಪ ಹೇಳಿದರು.

ಈ ಸಂದರ್ಭ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆಂಚರೆಡ್ಡಿ ಅವರು ಜೇನು ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕೊಡಗಿನ ಜೇನು ಉತ್ಪಾದನೆ ಗಣನೀಯವಾಗಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಸರ ನಾಶವಾಗಿರುವದು ಕಾರಣ. ಪೊನ್ನಂಪೇಟೆ ಅರಣ್ಯ ವಿದ್ಯಾಲಯ ಜೇನು ಕೃಷಿ ವೃದ್ಧಿಸುವ ಗಿಡ ಮರಗಳನ್ನು ಸಂಶೋಧಿಸಿದ್ದು ಅವುಗಳನ್ನು ಜೇನು ಕೃಷಿ ಮಾಡುವವರು ಬೆಳೆಸುವಂತೆ ಸಲಹೆ ನೀಡಿದರು.

ಗೋಣಿಕೊಪ್ಪಲು ಕೆ.ವಿ.ಕೆ. ಸಸ್ಯ ತಜ್ಞ ವೀರೇಂದ್ರ ಕುಮಾರ್ ಮಾತನಾಡಿ ಕಾಫಿ ಮಾರುಕಟ್ಟೆಯಲ್ಲಿ ಔಟ್‍ಟರ್ನ್ ಪರಿಗಣಿಸುವಂತೆ, ಮುಂದಿನ ದಿನಗಳಲ್ಲಿ ಕರಿಮೆಣಸಿಗೂ ಔಟ್‍ಟರ್ನ್ ಪರಿಗಣಿಸಲಾಗುತ್ತದೆ. 1 ಲೀಟರ್ ಒಣ ಕರಿಮೆಣಸು 1 ಕೆ.ಜಿ. ಗೆ ಪರಿವರ್ತಿಸಿದರೆ ಕನಿಷ್ಟ 550 ಗ್ರಾಂ ಕ್ಕಿಂತ ಮೇಲ್ಪಟ್ಟು ತೂಕ ಬಂದರೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಆದ್ದರಿಂದ ಗುಣ ಮಟ್ಟದ ಕರಿಮೆಣಸು ಬೆಳೆಸಲು ಬೆಳೆಗಾರರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ನೀಡಿದರು. ಇದಲ್ಲದೆ ಭತ್ತದ ಬಿತ್ತನೆ ಬೀಜದ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ಪೆಮ್ಮಡಮಾಡ ರಮೇಶ್ ಮಾತನಾಡಿ ಭತ್ತ ಕೃಷಿಯಿಂದ ಅಂತರ್ಜಲ ಹೆಚ್ಚಾಗಲಿದೆ. ತಾನು ಇದರಲ್ಲಿ ತೊಡಗಿಸಿಕೊಂಡಿರುವದರಿಂದ ಈ ಬಾರಿ ಬರಗಾಲ ಉಂಟಾದರೂ ಬಾವಿಯಲ್ಲಿ ನೀರು ಲಭ್ಯವಾಗಿರುವದು ಇದಕ್ಕೆ ಸಾಕ್ಷಿ. ಜಿಲ್ಲೆಯ ಪ್ರತಿಯೊಬ್ಬ ರೈತರೂ ತಮ್ಮ ಆಹಾರಕ್ಕಾಗಿಯಾದರೂ ಭತ್ತ ಕೃಷಿ ಕೈಗೊಳ್ಳಬೇಕು. ಪಾಳು ಬಿಟ್ಟ ಗದ್ದೆಗಳಲ್ಲಿ ಮರುಕೃಷಿ ಮಾಡಲು ಉದ್ಯೋಗ ಖಾತ್ರಿ ಯೋಜನೆ ಮೂಲಕ ಕ್ರಿಯಾ ಯೋಜನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಅಭಿಪ್ರ್ರಾಯ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಪ್ರಗತಿಪರ ಬೆಳೆಗಾರ ಕೊಟ್ರಮಡÀ ಅರುಣ್ ಅಪ್ಪಣ್ಣ, ಪ್ರಾಧ್ಯಾಪಕ ಎನ್.ಎಂ. ರಮೇಶ್, ಡಾ. ಗಣೇಶ್ ಪ್ರಸಾದ್, ಗ್ರಾ.ಪಂ.ಸದಸ್ಯ ಚೋನೀರ ಕಾಳಯ್ಯ ಮತ್ತಿತರರು ಹಾಜರಿದ್ದರು.