ವೀರಾಜಪೇಟೆ, ಜೂ. 16: ವೀರಾಜಪೇಟೆಯಲ್ಲಿ ಕಳವು ಮಾಡಿದ್ದ ಮಹೇಂದ್ರ [ಟರ್ಬೊ] ಜೀಪನ್ನು ಕೇರಳದಲ್ಲಿ ಪತ್ತೆಮಾಡಿದ ನಗರ ಠಾಣೆ ಪೊಲೀಸರ ತಂಡ ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದೆ.

ವಿರಾಜಪೇಟೆ ಪಟ್ಟಣದಲ್ಲಿರುವ ಬೆಸ್ಟ್ ಮೋಟಾರ್ ಆಟೋಲಿಂಕ್ಸ್‍ನ ಶೆಡ್‍ನಲ್ಲಿ ತಾ. 3 ರಂದು ನಿಲ್ಲಿಸಲಾಗಿದ್ದ ಮಹೇಂದ್ರ ಜೀಪು (ಕೆ.ಎ.28 ಎಂ. 5226) ಕಾಣೆಯಾಗಿತ್ತು. ಅದರ ಮಾಲೀಕ ಮಹಮದ್ ಕುಂಞÂ ಎಂಬುವರು ನಗರ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿದ ಪೊಲೀಸರ ತಂಡ ಮೋಟಾರ್ ಆಟೋಲಿಂಕ್ಸ್‍ನಲ್ಲಿ ಹಿಂದೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಇಡುಕಿ ಜಿಲ್ಲೆಯ ಕುಮ್ಮಲಾ ಪೊಲೀಸ್ ಠಾಣಾ ವ್ಯಾಪ್ತಿಯ ಯೂನಸ್ ಎಂಬಾತನ ಮನೆಯನ್ನು ಪತ್ತೆಹಚ್ಚಿ ಆತನ ಮನೆಯ ಮುಂದೆ ನಿಂತಿದ್ದ ಜೀಪನ್ನು ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ಯೂನಸ್‍ನ ಪತ್ತೆಗಾಗಿ ಬಲೆಬೀಸಿರುವದಾಗಿ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ. ವೀರಾಜಪೇಟೆ ಡಿ.ವೈ.ಎಸ್.ಪಿ.ನಾಗಪ್ಪ ಅವರ ಆದೇಶದಂತೆ. ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.