ಮಡಿಕೇರಿ, ಜೂ. 16: ಜಿಲ್ಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಇಲ್ಲಿನ ವೈದ್ಯಕೀಯ ಕಾಲೇಜು ಹಾಗೂ ಕುಶಾಲನಗರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊರತೆಗಳ ಬಗ್ಗೆ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸರಕಾರದ ಗಮನ ಸೆಳೆದಿದ್ದಾರೆ.

ನಗರದ ಹೊರವಲಯದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ನಿಲಯಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವೀಣಾ ಅಚ್ಚಯ್ಯ ಪ್ರಸ್ತಾಪಿಸಿದ್ದು, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ಗಮನ ಹರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಅಲ್ಲದೆ ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಯೋಗಾಲಯ ಉಪಕರಣಗಳ ಕೊರತೆ ಬಗ್ಗೆ ಮೇಲ್ಮನೆ ಸದಸ್ಯರು ಪ್ರಸ್ತಾಪಿಸಿದಾಗ, ಆ ಬಗ್ಗೆ ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರೆಡ್ಡಿ ಪ್ರತ್ಯುತ್ತರ ನೀಡಿದ್ದಾರೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕುಶಾಲನಗರ ಸಂಸ್ಥೆಗೆ ಯಂತ್ರೋಪಕರಣ ಖರೀದಿಗಾಗಿ ಅನುದಾನವನ್ನು ವರ್ಷವಾರು ಬಿಡುಗಡೆ ಮಾಡಿದ್ದು, ಸದರಿ ಮೊತ್ತದಲ್ಲಿ ಅಂದಾಜು ರೂ. 33.66 ಲಕ್ಷಗಳ ಯಂತ್ರೋಪಕರಣಗಳನ್ನು ಸಿವಿಲ್ ವಿಭಾಗಕ್ಕೆ ಖರೀದಿಸಲಾಗಿದೆ. ಸಿವಿಲ್ ಇಂಜಿನಿಯರಿಂಗ್ ಕೋರ್ಸ್‍ನಲ್ಲಿ ಒಟ್ಟು 6 ಲ್ಯಾಬ್‍ಗಳಿದ್ದು, ಅವುಗಳಲ್ಲಿ 4 ಲ್ಯಾಬ್‍ಗಳು ಈಗಾಗಲೇ ಸ್ಥಾಪಿತವಾಗಿದ್ದು, ಅಗತ್ಯ ಯಂತ್ರೋಪಕರಣಗಳನ್ನು 2016-17ನೇ ಸಾಲಿನಲ್ಲಿ ಖರೀದಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ನಡೆಸಲಾಗುವದೆಂದು ಪ್ರಿನ್ಸಿಪಾಲರು ತಿಳಿಸಿರುತ್ತಾರೆ. ಸಿವಿಲ್ ಇಂಜಿನಿಯರಿಂಗ್ ಕೋರ್ಸ್‍ಗೆ ಸಂಬಂಧಿಸಿದಂತೆ ಪ್ರಯೋಗಾಲಯ ತಂತ್ರಜ್ಞಾನ ವಿಭಾಗವನ್ನು ಸಾಮೂಹಿಕ ವ್ಯವಸ್ಥೆಯೊಂದಿಗೆ ಕುಶಾಲನಗರ ಸೇರಿದಂತೆ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ರೂ. 26.78 ಕೋಟಿಗಳ ಮೊತ್ತದಲ್ಲಿ ಖರೀದಿಸಲಾಗುತ್ತಿದ್ದು, ಈಗಾಗಲೇ ಪ್ರತಿ ಕಾಲೇಜಿಗೆ 150 ಕಂಪ್ಯೂಟರ್‍ಗಳಂತೆ 10 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಒಟ್ಟು 1500 ಕಂಪ್ಯೂಟರ್‍ಗಳನ್ನು ಅಂದಾಜು ರೂ. 6.65 ಕೋಟಿಗಳ ಮೊತ್ತದಲ್ಲಿ ಖರೀದಿಸಲಾಗಿದೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಕೋರ್ಸ್‍ಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಅಂದಾಜು ರೂ. 5.28 ಕೋಟಿಗಳಲ್ಲಿ ಖರೀದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇ-ಟೆಂಡರ್ ಕರೆಯಲಾಗಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.