ನಾಪೆÇೀಕ್ಲು, ಜೂ. 16: ಜಿಲ್ಲೆಯ ಬಹುತೇಕ ವಿದ್ಯಾಸಂಸ್ಥೆಗಳು ದಾನಿಗಳ, ಶಿಕ್ಷಣಾಭಿಮಾನಿಗಳ ಪೆÇ್ರೀತ್ಸಾಹದಿಂದ ಸ್ಥಾಪಿಸಲ್ಪಟ್ಟಿದ್ದಾಗಿದೆ. ಆದರೆ ಶತಮಾನ ಕಂಡ ಇಂತಹ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ, ಶಿಕ್ಷಕರ ಹಾಗೂ ಇಲಾಖೆಯ ನಿರ್ವಹಣೆ ಕೊರತೆ ಯಿಂದ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವದು ಹಿರಿಯ ಜೀವಿಗಳ ಶ್ರಮಕ್ಕೆ ಬೆಲೆಯಿಲ್ಲ ದಂತಾಗಿದೆ. ಸರಕಾರ, ಶಿಕ್ಷಣ ಇಲಾಖೆ, ಸರಕಾರಿ ಶಾಲೆಗಳ ಪುನಶ್ಚೇತನಕ್ಕೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ಚಿಂತನೆಯ ಕಾರಣದಿಂದ ‘ಹಲ್ಲಿದ್ದವನಿಗೆ ಕಡಲೆ ಇಲ್ಲ-ಕಡಲೆ ಇದ್ದವನಿಗೆ ಹಲ್ಲಿಲ್ಲ’ ಎಂಬ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಇದಕ್ಕೆ ಉದಾಹರಣೆ ನೆಲಜಿ ಮಾದರಿ ಪ್ರಾಥಮಿಕ ಶಾಲೆ. ಇಲ್ಲಿ 1ರಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಯಾವದೇ ವಿದ್ಯಾರ್ಥಿಯೂ ಇಲ್ಲಿ ದಾಖಲಾಗಿಲ್ಲ. 2ನೇ ತರಗತಿಯಿಂದ 7ನೇ ತರಗತಿವರೆಗೆ ಕೇವಲ 31 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರೂ, ನಿಯೋಜಿತ ಪ್ರಬಾರ ಮುಖ್ಯ ಶಿಕ್ಷಕರೊಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲಾ ದಾಖಲಾತಿಗಾಗಿ ಇವರು ಶಾಲಾ ಮಟ್ಟ, ಗ್ರಾಮ ಪಂಚಾಯಿತಿ ಮಟ್ಟ ಸೇರಿದಂತೆ ಮೂರು ಹಂತದಲ್ಲಿ ಶಾಲಾ ದಾಖಲಾತಿ ಆಂದೋಲನ ನಡೆಸಿದರೂ ಇಲ್ಲಿ ಯಾವದೇ ಫಲ ದೊರೆತಿಲ್ಲ.

29 ತರಗತಿಗಳು: ಬಲ್ಲ ಮೂಲಗಳ ಪ್ರಕಾರ ನಲಿ ಕಲಿ ಸೇರಿದಂತೆ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಎಲ್ಲಾ ವಿಷಯಗಳನ್ನು ಬೋಧಿಸಲು ದಿನಕ್ಕೆ 29 ತರಗತಿಗಳನ್ನು ನಡೆಸುವ ಅಗತ್ಯವಿದೆ. ಆದರೆ ಇಲ್ಲಿ ಅಧಿಕಾರ ವಹಿಸಿಕೊಂಡಿರುವ ಪ್ರಬಾರ ಮುಖ್ಯ ಶಿಕ್ಷಕರು ಈ ತರಗತಿಗಳೊಂದಿಗೆ ಶಾಲಾ ಮಕ್ಕಳ ದಾಖಲಾತಿ, ವರ್ಗಾವಣೆ ಪತ್ರ, ಅಕ್ಷರ ದಾಸೋಹ ಕಡತಗಳು, ಬಿಸಿಯೂಟ, ಹಾಲು, ಮುಖ್ಯ ಶಿಕ್ಷಕರ ಸಭೆ, ಬ್ಯಾಂಕ್ ಕೆಲಸ, ಕಚೇರಿ ಕೆಲಸಗಳನ್ನು ಕೂಡಾ ನಿರ್ವಹಿಸಬೇಕಾಗಿದೆ. ಇದನ್ನು ಇವರೊಬ್ಬರೇ ನಿರ್ವಹಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವದು ಹೇಗೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಾದರಿ ಪ್ರಾಥಮಿಕ ಶಾಲೆಗಳಿಗೆ ನಾಲ್ಕು ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸುವ ಬಗ್ಗೆ ಆದೇಶವಿದ್ದರೂ ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನುತ್ತಿದ್ದಾರೆ ಸಾರ್ವಜನಿಕರು.

ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ: ಈ ಶಾಲೆಯಲ್ಲಿ ಹಿಂದೆ ಖಾಸಗಿ ಶಾಲೆಗಳ ಆರಂಭಕ್ಕೆ ಮುನ್ನ 600-700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಈ ಶಾಲೆಯು ಶೋಚನೀಯ ಸ್ಥಿತಿ ತಲಪಿದೆ. ಒಂದನೇ ತರಗತಿಗೆ - ಸೊನ್ನೆ, ಎರಡನೇ ತರಗತಿ - ಐದು, ಮೂರನೇ ತರಗತಿ - ಏಳು, ನಾಲ್ಕನೇ ತರಗತಿ - ನಾಲ್ಕು, ಐದನೇ ತರಗತಿ - ನಾಲ್ಕು, ಆರನೇ ತರಗತಿ - ಐದು, ಏಳನೇ ತರಗತಿಯಲ್ಲಿ ಮೂರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ: ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಎಂ.ಟಿ. ಹೇಮಾವತಿ ಅವರ ನೇತೃತ್ವದಲ್ಲಿ ಸದಸ್ಯರು ಮತ್ತು ಪೆÇೀಷಕರ ತಂಡ ಶಿಕ್ಷಕರ ಕೊರತೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿತ್ತು. ಇದಕ್ಕೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಬ್ಬ ಶಿಕ್ಷಕಿ, ಮತ್ತೋರ್ವ ಅತಿಥಿ ಶಿಕ್ಷಕಿಯನ್ನು ಕೂಡಲೇ ನೇಮಿಸುವದಾಗಿ ಭರವಸೆ ನೀಡಿದ್ದರು. ಆದರೆ ಈ ಕಾರ್ಯ ಇನ್ನೂ ನಡೆದಿಲ್ಲ.

ಹಳೇ ಕಟ್ಟಡ: ಈ ಶಾಲೆಗೆ 7.2 ಏಕರೆ ಸ್ಥಳವಿದೆ. ಇದರಲ್ಲಿ ವಿಶಾಲ ಆಟದ ಮೈದಾನ, ಅಗತ್ಯಕ್ಕೆ ಬೇಕಾದ ಕಟ್ಟಡಗಳು ಇವೆ. ಆದರೆ ಶತಮಾನದ ಹಿಂದೆ ನಿರ್ಮಿಸಲಾದ ಬೃಹದಾಕಾರದ ಕಟ್ಟಡ ಕುಸಿದು ಬೀಳುವ ಹಂತ ತಲಪಿದೆ. ಈ ಕಟ್ಟಡ ತೆರವುಗೊಳಿಸಲು ಎರಡು ಬಾರಿ ಮನವಿ ಸಲ್ಲಿಸಲಾಗಿದ್ದರೂ ಇಲ್ಲಿಯವರೆಗೆ ಕಟ್ಟಡ ತೆರವಿಗೆ ಕ್ರಮಕೈಗೊಂಡಿಲ್ಲ.

ಈಗ ಮಳೆಗಾಲ ಆರಂಭವಾಗಿದ್ದು, ಶಾಲಾ ವಿದ್ಯಾರ್ಥಿಗಳು ಇದರ ಸಮೀಪದಲ್ಲಿಯೇ ಓಡಾಡುವ ಕಾರಣ ಅಪಾಯ ಸಂಭವಿಸುವ ಭೀತಿ ಉಂಟಾಗಿದೆ. ಆದುದರಿಂದ ಸಂಬಂಧಿಸಿದವರು ಹಳೇ ಶಾಲಾ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳುವದರೊಂದಿಗೆ ಈ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವದಲ್ಲದೆ ಸರಕಾರಿ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕಾಗಿದೆ.

- ಪಿ.ವಿ. ಪ್ರಭಾಕರ್