ಮಡಿಕೇರಿ, ಜೂ. 17: ಕರ್ನಾಟಕದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಆಂಗ್ಲ ಭಾಷೆ ಬದುಕಿನ ಭಾಷೆಯಾದರೆ, ಕನ್ನಡ ಜೀವದ ಭಾಷೆಯಾಗಬೇಕು ಎಂದು ಹೇಳಿದರು. ಕೊಡಗು ಸ್ವರ್ಗಭೂಮಿ. ಇಲ್ಲಿ ಯಾರೂ ಕೂಡ ತಮ್ಮ ಆಸ್ತಿಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವಂತೆ ಸಲಹೆಯಿತ್ತರು.ಕೆ.ಜಿ.ಬಿ. ಅನಿಸಿಕೆ : ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ

(ಮೊದಲ ಪುಟದಿಂದ) ಕೆ.ಜಿ. ಬೋಪಯ್ಯ ಮಾತನಾಡಿ, ಕನ್ನಡದ ನೆಲದಲ್ಲಿ ಕನ್ನಡಕ್ಕಾಗಿ ಹೋರಾಡ ಬೇಕಾದ ಪರಿಸ್ಥಿತಿ ಬಂದೊದಗಿ ರುವದು ವಿಷಾದನೀಯ ಎಂದರು. ಯಾಂತ್ರಿಕ ಯುಗದಲ್ಲಿ ಕನ್ನಡದೊಂದಿಗೆ ಆಂಗ್ಲ ಭಾಷೆಯು ಅನಿವಾರ್ಯವಾದರೂ ಕನ್ನಡ ಕಡೆಗಣನೆ ಸಲ್ಲದು ಎಂದರು. ಮಳೆಗಾಲದಲ್ಲಿ ಕೊಡಗಿನವರು ಕಷ್ಟ-ನಷ್ಟಗಳನ್ನು ಅನುಭವಿಸುತ್ತಾರೆ. ಆದರೂ ನಾಡಿನ ಸುಭಿಕ್ಷೆಗಾಗಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸುವ ಹೃದಯವೈಶಾಲ್ಯತೆ ಇಲ್ಲಿನವರಿಗಿದೆ ಎಂದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡದ ಬಲವರ್ಧನೆಗಾಗಿ ಎಲ್ಲರೂ ಸಂಕಲ್ಪ ತೊಡಬೇಕೆಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಕಳೆದ ಬಾರಿಯ ಅಧ್ಯಕ್ಷರಾದ ಡಾ. ಶ್ರೀಧರ್ ಹೆಗಡೆ ಅವರು ಮಾತನಾಡಿ, ಭಾಷೆ ಸಂಬಂಧಗಳನ್ನು ಬೆಳೆಸುತ್ತದೆ. ಕನ್ನಡ ಭಾಷೆಯ ಜ್ಞಾನದ ಬಗ್ಗೆ ಮತ್ತೊಬ್ಬರಿಗೆ ಪರಿಚಯಿಸುವ ಕೆಲಸವನ್ನು ಮಾಡುವಂತಾಗ ಬೇಕೆಂದರಲ್ಲದೆ, ಕೇಂದ್ರ ಸರಕಾರ ಜನ, ಔಷಧಿ ಯೋಜನೆ ಬಗ್ಗೆ ಅಂತರ್ಜಾಲದಲ್ಲಿ ‘ಜನವರಿ ಆಶಾದಿ ಯೋಜನೆ’ ಎಂದು ಕನ್ನಡದಲ್ಲಿ ತಪ್ಪಾಗಿ ಬರೆಯಲಾಗಿದೆ. ಇಂತಹ ಅವಾಂತರಗಳಿಗೆ ಕೊನೆ ಹಾಡಬೇಕು. ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಉದ್ಯೋಗಕ್ಕಾಗಿ ಆಂಗ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡ ನಾಡಲ್ಲಿ ಕನ್ನಡದ ಬಗ್ಗೆ ತಾತ್ಸಾರ ಮನೋಭಾವನೆ ಸರಿಯಲ್ಲ. ಕೊಡಗಿನಲ್ಲೂ ಕೊಡವ, ಅರೆಭಾಷೆ, ತುಳು ಎಲ್ಲ ಭಾಷೆಗಳ ಬೆಳವಣಿಗೆ ಆಗಬೇಕು. ಅದರೊಂದಿಗೆ ಕನ್ನಡಕ್ಕೂ ಪ್ರಾಮುಖ್ಯತೆ ನೀಡುವಂತಾಗ ಬೇಕೆಂದರು. ಕೊಡಗಿನಲ್ಲಿ ಹಲವಾರು ಮಂದಿ ಸಾಹಿತ್ಯ ಕ್ಷೇತ್ರದಲ್ಲಿ ದುಡಿದಿದ್ದಾರೆ; ಸಾಧನೆ ಮಾಡಿದ್ದಾರೆ. ಆದರೆ ಕೊಡಗಿನಲ್ಲಿ ಸಾಹಿತಿ ಹಾಗೂ ಸಾಹಿತ್ಯವನ್ನು ಬೆಳೆಸುವಲ್ಲಿ ‘ಶಕ್ತಿ’ ಪತ್ರಿಕೆಯ ಸೇವೆ ಸ್ಮರಣೀಯ ಎಂದರು.

‘ಶಕ್ತಿ’ಯ ಸ್ಥಾಪಕ ಸಂಪಾದಕರಾದ ಬಿ.ಎಸ್. ಗೋಪಾಲಕೃಷ್ಣ ಅವರು ಕೂಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದÀು ಟಿ.ಪಿ. ರಮೇಶ್ ಹೇಳಿದರು.

ಕೊಡಗು ಜಾನಪದ ಪರಿಷತ್‍ನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಮಾತನಾಡಿ, ಪ್ರತಿಯೊಬ್ಬರೂ ತೇಜೋಮಯವಾದ ಜೀವನ ಸಾಗಿಸಬೇಕು. ನಿರ್ದಿಷ್ಟ ಗುರಿ, ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನದೊಂದಿಗೆ ಮಾದರಿ ಜೀವನ ನಡೆಸಿದಾಗ ಆತ್ಮ ಜ್ಯೋತಿಯು ಸದಾ ಬೆಳಗುತ್ತಿರುತ್ತದೆ. ಎಷ್ಟೇ ಏಳಿಗೆ ಸಾಧಿಸಿದರೂ ಸ್ವಧರ್ಮ ಹಾಗೂ ಸ್ವ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ ಅವರು, ಭಾಷೆ ಬಳಕೆಯ ಬಗ್ಗೆ ಬದ್ಧತೆ ಇರಬೇಕೆಂದರು.

ವೇದಿಕೆಯಲ್ಲಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಸಾಪ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳು ಇತರರಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಯಾಡಿದರೆ, ಕಸಾಪ ನಿರ್ದೇಶಕರಾದ ರಫೀಕ್ ಅಹ್ಮದ್, ಅನಿತಾ ದೇವಯ್ಯ ನಿರೂಪಿಸಿದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿದರು. ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ ವಂದಿಸಿದರು.