ಮಡಿಕೇರಿ, ಜೂ. 17: ಮಾಜಿ ಸಂಸದ ಹಾಗೂ ಪಕ್ಷದ ಮುಖಂಡ ಅಡಗೂರು ಎಚ್. ವಿಶ್ವನಾಥ್ ಅವರ ವಿಶ್ವಾಸಿಗಳ ಸಭೆಯು ಇಂದು ನಗರದಲ್ಲಿ ನಡೆಯುವದರೊಂದಿಗೆ, ಜಿಲ್ಲೆ ಮತ್ತು ರಾಜ್ಯದಲ್ಲಿನ ಪಕ್ಷದ ಕೆಲವರ ವಿರುದ್ಧ ಮಾತಿನ ಛಾಟಿ ಬೀಸುವ ಮೂಲಕ ಕಿಡಿಕಾರಿದರು. ಆದರೆ ವಿಶ್ವನಾಥ್ ಹಾಗೂ ಬೆಂಬಲಿಗರು ತಮ್ಮ ಮುಂದಿನ ನಡೆಯನ್ನು ನಿಗೂಢವಾಗಿ ಕಾಯ್ದುಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ಮಾತೃಸ್ಥಾನದಲ್ಲಿ ಗೌರವದ ನುಡಿಯಾಡಿದ ವಿಶ್ವನಾಥ್, ಪಕ್ಷವನ್ನು ಟೀಕಿಸಲು ಯಾರಿಗೂ ಹಕ್ಕಿಲ್ಲವೆಂದಾಗ ಸಭಿಕರು ಅರೆಕ್ಷಣ ತಬ್ಬಿಬ್ಬಾದರು! ಮಾತು ಮುಂದುವರಿಸಿದ ವಿಶ್ವನಾಥ್ ಕೆಲವರ ಅಹಂಕಾರ, ಅಧಿಕಾರದ ದರ್ಪದಿಂದ ತಮ್ಮಂತಹ ನಾಯಕರ ಸಹಿತ ಪ್ರಾಮಾಣಿಕ ಕಾರ್ಯಕರ್ತರು ನಲುಗಿ ಹೋಗಿದ್ದಾರೆ ಎಂದು ಬೇಸರ ಹೊರಗೆಡವಿದರು.

ಪತ್ರಕರ್ತರು ಜೆಡಿಎಸ್ ಸೇರುವಿರಾ? ಎಂದು ಪ್ರಶ್ನೆ ಮುಂದಿಟ್ಟಾಗ ಈ ಕ್ಷಣ ಕೂಡ ತಾನು ಕಾಂಗ್ರೆಸ್ಸಿಗ ಎಂದರು. ಇದುವರೆಗೆ ಅಪ್ಪ- ಮಕ್ಕಳ ಪಕ್ಷ ಜೆಡಿಎಸ್ ಎಂದು ಜರೆಯುತ್ತಿದ್ದೀರಲ್ಲಾ ಎಂದು ಪ್ರಶ್ನಿಸಲಾಗಿ, ತಾನು ತಾಯಿ - ಮಗನ ಪಕ್ಷ ಕಾಂಗ್ರೆಸ್ಸಿನಲ್ಲಿದ್ದು, ಜೆಡಿಎಸ್ ಅಪ್ಪ- ಮಕ್ಕಳ ಪಕ್ಷ ಎಂದರೆ ಅರ್ಥವೇನು? ಎಂದು ಮರುಪ್ರಶ್ನೆ ಹಾಕಿದರು.

ಮಾತು ಮಾತಿಗೂ ತಮ್ಮನ್ನು ಪ್ರಾಮಾಣಿಕ ಕಾಂಗ್ರೆಸ್ಸಿಗ ಎಂದು ಹೇಳಿಕೊಂಡ ವಿಶ್ವನಾಥ್, ಇಂದಿನ ಸಭೆಯಲ್ಲಿ ಅವರನ್ನು ಬೆಂಬಲಿಸಿ ಅಥವಾ ಕರೆಗೆ ಓಗೊಟ್ಟು ಬಂದಿದ್ದವರಿಗೆ ಕೂಡ ಯಾವದೇ ಸುಳಿವು ಕೊಡದೆ ತಮ್ಮ ಮುಂದಿನ ನಡೆಯನ್ನು ನಿಗೂಢವಾಗಿ ಇರಿಸಿಕೊಂಡಂತೆ ಭಾಸವಾಯಿತು.

-ಶ್ರೀಸುತ.