ಕೊಡಗು ಎಂಬ ಹೆಸರೇ ಕೊಡಗಿನ ಗಡಿಯಾಚೆ ಸಂಚಲನ ಮೂಡಿಸುತ್ತದೆ. ಕೊಡಗಿನ ಬಗ್ಗೆ ಇಲ್ಲಿನ ಜನರ ಬಗ್ಗೆ ಹೊರ ಜಿಲ್ಲೆ, ರಾಜ್ಯದಲ್ಲಿ ವಿಶೇಷ ಅಭಿಮಾನ, ಪ್ರೀತಿ ಇದ್ದೇ ಇದೆ. ಆದರೆ ಜಿಲ್ಲೆಯೊಳಗೆ ಇತ್ತೀಚಿನ ವರ್ಷಗಳಲ್ಲಿ ಏನಾಗುತ್ತಿದೆ? ಹಲವಾರು ವರ್ಷಗಳಿಂದ ಅವರವರ ಪಾಡಿಗೆ ಅವರವರ ಪದ್ಧತಿ ಪರಂಪರೆಗಳಿಗೆ ಪರಸ್ಪರ ಗೌರವ ಕೊಟ್ಟುಕೊಂಡು ಎಲ್ಲಾ ಜಾತಿ - ಜನಾಂಗದವರು ಪ್ರೀತಿ, ವಾತ್ಸಲ್ಯದಿಂದ ಜೀವನ ನಡೆಸಿಕೊಂಡು ಬರುತ್ತಿದ್ದರು.

ಈ ಮಧುರ ಬಾಂಧವ್ಯ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿಲ್ಲ ಎಂಬದು ಕಟು ಸತ್ಯ. ಜಿಲ್ಲೆಯೊಳಗೆ ನೂರಾರು ವರ್ಷಗಳಿಂದ ಸಹಬಾಳ್ವೆ ನಡೆಸಿಕೊಂಡು ಬಂದಿದ್ದ ಹಿರಿಯರ ಮಾರ್ಗಪಂಕ್ತಿ ಮರೆಯಾಗಿದೆ. ಪರಸ್ಪರ ದೂಷಣಾಮನೋಭಾವ, ಭಿನ್ನಾಭಿಪ್ರಾಯಗಳು, ಬೇಕು - ಬೇಡಿಕೆಗಳು ಕೇಳಿ ಬರುತ್ತಿದ್ದು, ಒಂದು ರೀತಿಯಲ್ಲಿ ಈ ಆಂತರಿಕ ಒಳಬೇಗುದಿ ಆತಂಕಕಾರಿ.

ಈ ಪರಿಸ್ಥಿತಿಯ ಲಾಭ ಬೇರೆ ತರಹದಲ್ಲಿ ಜಿಲ್ಲೆಯ ಬುಡಕ್ಕೆ ಧಕ್ಕೆ ತರುವಂತಹ ತಿರುವು ಪಡೆಯುತ್ತಿರುವದು ಸೂಕ್ಷ್ಮವಾಗಿ ಅವಲೋಕಿಸಿದರೆ, ಅರಿವಾಗಬಹುದು. ಕೊಡಗು ಜಿಲ್ಲೆಯ ಎಂದಿನ ಆಗು - ಹೋಗುಗಳ ಬಗ್ಗೆ ಯಾವದೇ ಸಮಸ್ಯೆಗಳು ಇರಲಿಲ್ಲ. ಇದೀಗ ಎಲ್ಲವೂ ಪ್ರಶ್ನಾರ್ಹವಾಗುತ್ತಿದೆ. ಕೆಲವರಿಗೆ ಬೇಡ ಎನ್ನುವದು ಇನ್ನೂ ಹಲವರಿಗೆ ಬೇಕು. ಬೇಕು ಎನ್ನುವದು ಬೇಡ ಎಂಬ ವಾದಗಳು ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕೇಳಿಬರುತ್ತಿದೆ. ಒಗ್ಗಟ್ಟಿನ ಕೊರತೆಯಿಂದ ಏನು ಬೇಕು. ಏನು ಬೇಡ ಎಂಬ ಸ್ಪಷ್ಟ - ದಿಟ್ಟ ಏಕಾಭಿಪ್ರಾಯದ ನಿರ್ಧಾರಗಳನ್ನು ಕೈಗೊಳ್ಳುವದು ಸಾಧ್ಯವಾಗುತ್ತಿಲ್ಲ. ಬೆಕ್ಕಿಗೆ ಗಂಟೆ ಕಟ್ಟೋರಾರು..? ಎಂಬಂತಹ ಸನ್ನಿವೇಶ ಎದುರಾಗಿರುವದು ದುರಂತ.

ಈ ಪರಿಸ್ಥಿತಿಯಿಂದಾಗಿಯೇ ಕೊಡಗಿನಲ್ಲಿ ಇತ್ತೀಚಿನ ಹೋರಾಟಗಳು ಲೆಕ್ಕಕ್ಕೆ ಇಲ್ಲದಂತಾಗುತ್ತಿವೆ. ಈ ಹಿಂದೆ ಕಂಬದ ಕಡ, ಬರಪೊಳೆ, ಇರ್ಪು, ಅಬ್ಬಿಫಾಲ್ಸ್ ಜಲ ವಿದ್ಯುತ್‍ನಂತಹ ಯೋಜನೆಗಳ ವಿರುದ್ಧ ಇಡೀ ಜನಸಮೂಹ ಒಂದಾಗಿ ನಿಂತ ಪರಿಣಾಮ ಈ ಮಾರಕ ಯೋಜನೆಗಳು ತಡೆ ಹಿಡಿಯಲ್ಪಟ್ಟಿದ್ದು, ಇತಿಹಾಸ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದಲ್ಲಾ ಒಂದು ಯೋಜನೆಗಳು, ಹೊಸ ಹೊಸ ಬೆಳವಣಿಗೆಗಳು ಜಿಲ್ಲೆಯ ಭೌಗೋಳಿಕ ಕತೆ, ಸಾಂಸ್ಕøತಿಕತೆ, ಪರಿಸರಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಪದೇ ಪದೇ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿವೆ.

ಇದರ ವಿರುದ್ಧ ಹೋರಾಟಗಳು ನಡೆದರೂ ಜಯ ಸಿಗುತ್ತಿಲ್ಲ. ಒಂದೊಮ್ಮೆ ಪ್ರತ್ಯೇಕ ರಾಜ್ಯವಾಗಿದ್ದು, ಕರ್ನಾಟಕದೊಂದಿಗೆ ವಿಲೀನದ ಬಳಿಕ ಮೂರು ವಿಧಾನ ಸಭಾ ಕ್ಷೇತ್ರ ಹೊಂದಿದ್ದ ಕೊಡಗು ಎರಡು ಕ್ಷೇತ್ರಕ್ಕೆ ಸೀಮಿತಗೊಂಡಾಗ ಭಾರೀ ಹೋರಾಟ ಬಂದ್ ನಡೆಯಿತು. ಅಲ್ಪವೇ ಸಮಯದಲ್ಲಿ ಚುನಾವಣೆ ಎದುರಾದಾಗ ರಾಜಕೀಯ ಪಕ್ಷಗಳು ಮಾತ್ರವಲ್ಲ ಜನರೂ ಇದನ್ನು ಅಪ್ಪಿಕೊಂಡರು. ವಿಧಾನ ಸಭಾ ಕ್ಷೇತ್ರ 3 ರಿಂದ 2 ಕ್ಕೆ ಇಳಿಯಿತು. ಕೊಡಗಿನ ಜಮ್ಮಾ ಬಾಣೆಗೆ ಸಂಬಂಧಿಸಿದಂತೆ ಪಕ್ಷಾತೀತ ಹೋರಾಟ ಫಲಪ್ರದವಾದರೂ ಇನ್ನೂ ಅಂತಿಮ ಫಲಿತಾಂಶ ದೊರಕದೆ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತಾಗಿದೆ.

ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಹೈಟೆನ್ಷನ್ ಮಾರ್ಗ ಕೊಂಡೊಯ್ಯುವದನ್ನು ವಿರೋಧಿಸಿ ತಿಂಗಳಾನುಗಟ್ಟಲೆ ಭಾರೀ ಹೋರಾಟ ನಡೆಯಿತು. ಆದರೆ ಏನಾಯಿತು? ವಿದ್ಯುತ್ ಮಾರ್ಗ ನಿರಾತಂಕವಾಗಿ ಕೇರಳ ತಲುಪಿತು. ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ತಾಣ ಘೋಷಣೆಯ ಯೋಜನೆ ಜಿಲ್ಲೆಗೆ ಮಾರಕವಾಗಲಿದೆ ಎಂದು ಕಳೆದ ಒಂದೆರಡು ವರ್ಷದಿಂದ ಮತ್ತೊಂದು ಹೋರಾಟ ಆರಂಭಗೊಂಡಿತು. ರಾಜಕೀಯ ಪಕ್ಷಗಳು ರಾಜಕೀಯ ಮರೆತು ಪಕ್ಷಾತೀತವಾಗಿ ಒಂದಾದವು. ಜಿಲ್ಲೆಯ ವಿವಿಧ ಸಮಾಜ, ಸಂಘ - ಸಂಸ್ಥೆ, ಸಂಘಟನೆಗಳೂ ಇದಕ್ಕೆ ಕೈ ಜೋಡಿಸಿದವು.

ಕೆಲವು ಪರಿಸರ ಪ್ರೇಮಿಗಳು ಜಿಲ್ಲೆಯ ಅಸ್ತಿತ್ವ ಉಳಿಯಬೇಕಾದರೆ ಈ ಯೋಜನೆ ಅಗತ್ಯ ಎಂದು ಪ್ರತಿಪಾದಿಸುತ್ತಾ ಬಂದರು. ಆದರೆ ಈ ಸ್ವರ ಅಷ್ಟಿರಲಿಲ್ಲ. ವಿರೋಧಿ ಹೋರಾಟವೇ ಬಲು ಜೋರಾಗಿತ್ತು. ರಾಜಕೀಯ ಪಕ್ಷಗಳು, ಬಹುತೇಕ ಮುಖಂಡರು ಒಂದಾಗಿದ್ದರಿಂದ ಜನತೆ ಈ ಯೋಜನೆ ಅನುಷ್ಠಾನಗೊಳ್ಳದು ಎಂದು ನಂಬಿದ್ದರು. ಆದರೆ ಈಗ ಏನಾಗಿದೆ.? ತಲಕಾವೇರಿ ಹಾಗೂ ಬ್ರಹ್ಮಗಿರಿ ಶ್ರೇಣಿ ಸದ್ದಿಲ್ಲದೆ ಸೂಕ್ಷ್ಮ ಪರಿಸರ ತಾಣ ಎಂದು ಅಧಿಕೃತವಾಗಿಯೇ ಘೋಷಣೆಯಾಗಿದೆ. ಇದರ ವಿರುದ್ಧ ಮತ್ತೆ ಮೆತ್ತಗಿನ ಹೋರಾಟ ನಡೆಯುತ್ತಿದೆಯಾದರೂ ಏನಾಗಬಹುದೆಂಬದಕ್ಕೆ ಬಹುಶಃ ಉತ್ತರವಿಲ್ಲ.

ಈ ನಡುವೆ ಮಕ್ಕಂದೂರು ತನಕದ ರೈಲು ಮಾರ್ಗ, ದಕ್ಷಿಣ ಕೊಡಗಿನ ಮೂಲಕ ತಲಚೇರಿಗೆ ರೈಲು ಮಾರ್ಗ ಹಾಗೂ ಕೇರಳದ ಮಾನಂದವಾಡಿ ಮತ್ತು ಮಟ್ಟನ್ನೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಪುಟ್ಟ ಕೊಡಗು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂಬ ಕೂಗು ಇದೀಗ ಹೊಸದಾಗಿ ಆರಂಭಗೊಂಡಿದೆ. ಈ ಹೋರಾಟ ಮುಂದೆ ಯಾವ ಫಲಿತಾಂಶ ಪಡೆಯಲಿದೆ ಎಂಬ ಬಗ್ಗೆಯೂ ಖಚಿತವಾಗಿ ಹೇಳಲು, ಊಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕೊಡಗಿನ ಜನತೆಯದ್ದು.

ಬಹುಶಃ ಇದಕ್ಕೆಲ್ಲಾ ಕಾರಣಗಳು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ನೆಲೆಸಿರುವ ಮೂಲ ನಿವಾಸಿಗಳು, ಇತರರ ನಡುವೆ ಈ ಹಿಂದಿನ ಒಗ್ಗಟ್ಟು ದೂರವಾಗಿರುವದು. ಆಂತರಿಕ ಭಿನ್ನಾಭಿಪ್ರಾಯ, ಒಳಬೇಗುದಿ ಬದಿಗಿಟ್ಟು ಈ ಹಿಂದಿನಂತೆ ಬದುಕಲು ಮುಂದಾದಲ್ಲಿ ಕೊಡಗಿನ ಮೇಲೆ ದಬ್ಬಾಳಿಕೆ ಮಾಡಲು ಯಾರಿಗೂ ಸಾಧ್ಯವಾಗದು. ಇಲ್ಲವಾದಲ್ಲಿ ಜಿಲ್ಲೆಯ ಜನರನ್ನು ‘ಕ್ಯಾರೇ’ ಎನ್ನದೆ ಇಲ್ಲಿ ಏನು ಬೇಕಾದರೂ ಆಗಬಹುದೇನೋ.?

ಬೇಸಿಗೆ ಬಂತೆಂದರೆ ಇಡೀ ಜಿಲ್ಲೆಯಲ್ಲಿ ವಿವಿಧ ಜನಾಂಗೀಯ ಕ್ರೀಡಾಕೂಟಗಳು ಸ್ಪರ್ಧಾತ್ಮಕ ರೀತಿಯಲ್ಲಿ ವಿಜೃಂಭಣೆಯಿಂದ ನಡೆದು ಆಯಾ ಜಾತಿ - ಜನಾಂಗದವರು ಒಟ್ಟಾಗಿ ಬೆರೆಯುವಂತೆ ಮಾಡುತ್ತವೆ. ಆಯಾ ಸಮುದಾಯದವರು ಒಂದಾಗುವದು, ಸಾಮರಸ್ಯದಿಂದಿರುವದು ಸ್ವಾಗತಾರ್ಹವಾದದ್ದು. ಅದೇ ಜಿಲ್ಲೆಗೆ ಸಮಸ್ಯೆಗಳು ಎದುರಾದರೆ ನಿಸ್ವಾರ್ಥ ಮನೋಭಾವನೆಯಿಂದ ಇದೇ ಒಗ್ಗಟ್ಟನ್ನು ಸಾರ್ವತ್ರಿಕವಾಗಿ ತೋರಿದಲ್ಲಿ ಮಾತ್ರ ಕೊಡಗು ಮುಂದಿನ ಪೀಳಿಗೆಗೆ ಈ ಹಿಂದಿನ ಕೊಡಗಿನಂತೆಯೇ ಉಳಿಯಬಹುದು.

-ಕಾಯಪಂಡ ಶಶಿ ಸೋಮಯ್ಯ