ಮಡಿಕೇರಿ, ಜೂ. 16: ಭಾರತ ಸರಕಾರವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ಸಂದರ್ಭ, ರಾಷ್ಟ್ರವ್ಯಾಪಿ ರೂಪುಗೊಂಡಿರುವ ಯೋಜನೆಗಳ ಅನುಷ್ಠಾನ ಕುರಿತು ಜನತೆಗೆ ಮಾಹಿತಿ ರವಾನಿಸುವ ಸಲುವಾಗಿ ತಾ. 23ರಂದು ಮಡಿಕೇರಿಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಯೋಜನೆಗಳು ಹಾಗೂ ಮೂರು ವರ್ಷಗಳ ಅಭಿವೃದ್ಧಿ ಸಂಬಂಧ ರೂಪುಗೊಂಡಿರುವ ಕಾರ್ಯಕ್ರಮಗಳ ಅನ್ವಯ ತಾ. 23ರಂದು ಜರುಗಲಿರುವ ಸಾಧನಾ ಸಮಾವೇಶದ ಬಗ್ಗೆ ಕೇಂದ್ರ ಸರಕಾರದಿಂದ ನಿಯೋಜನೆಗೊಂಡಿರುವ ಅಧಿಕಾರಿ ಜಲೇಂದ್ರ ಪ್ರಸಾದ್ ಎಂಬವರು ಮೊನ್ನೆ ಖುದ್ದಾಗಿ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಯುಕ್ತರಾಗಿರುವ ಜಲೇಂದ್ರ ಅವರು, ಕೊಡಗಿನಲ್ಲಿ ತಾ. 23ರಂದು ನಡೆಯಲಿರುವ ಸಮಾವೇಶದ ನೋಡಲ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ವಿಚಾರ ವಿನಿಮಯ ನಡೆಸಿ, ಅಂದಿನ ಸಾಧನಾ ಸಮಾವೇಶಕ್ಕೆ ಕೇಂದ್ರ ಸಚಿವರು, ಕೊಡಗಿನ ಉಸ್ತುವಾರಿ ಸಚಿವರು ಹಾಗೂ ಸಂಸದರ ಸಹಿತ ಜಿಲ್ಲೆಯ ಶಾಸಕರು, ಮೇಲ್ಮನೆ ಸದಸ್ಯರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ತೊಡಗಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.

ಅಲ್ಲದೆ, ನಗರದ ಕ್ರಿಸ್ಟಲ್‍ಕೋರ್ಟ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಂಡಿದ್ದು, ಸಾಧನಾ ಸಮಾವೇಶ ಏರ್ಪಡಿಸುವ ಈ ಸಭಾಂಗಣವನ್ನು ಕೇಂದ್ರದ ಅಧಿಕಾರಿಗಳು ಜಿಲ್ಲಾಧಿಕಾರಿಯೊಂದಿಗೆ ಖುದ್ದು ಪರಿಶೀಲನೆ ನಡೆಸಿ ತೆರಳಿರುವದಾಗಿ ತಿಳಿದುಬಂದಿದೆ.

ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಜಿ.ಪಂ. ಮಾಜೀ ಸದಸ್ಯ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಅವರು ಸಾಧನಾ ಸಮಾವೇಶದ ಸಂಯೋಜಕರಾಗಿ ನಿಯುಕ್ತಿಗೊಂಡಿದ್ದು, ನೋಡಲ್ ಅಧಿಕಾರಿ ಜಲೇಂದ್ರ ಅವರು ತಾ. 23ರ ಸಮಾವೇಶದ ಸ್ವರೂಪ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮನು ಪ್ರತಿಕ್ರಿಯೆ

ಸಾಧನಾ ಸಮಾವೇಶ ಕುರಿತು ಮನುಮುತ್ತಪ್ಪ ಅವರನ್ನು ಸಂಪರ್ಕಿಸಿದಾಗ, ಸಾಧನಾ ಸಮಾವೇಶವು ಕೇಂದ್ರ ಸರಕಾರಕ್ಕೆ ಸಂಬಂಧಿಸಿದಂತೆ ಆಯೋಜಿಸಿರುವ ಕಾರ್ಯಕ್ರಮವಾಗಿದ್ದು, ಕೇಂದ್ರ ಸಚಿವರುಗಳಾದ ಡಾ. ಹರ್ಷವರ್ದನ್ ಹಾಗೂ ಅನಂತ್‍ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಸೇರಿದಂತೆ ಶಾಸಕದ್ವಯರು, ಮೇಲ್ಮನೆ ಸದಸ್ಯರಿಬ್ಬರ ಸಹಿತ ಗ್ರಾ.ಪಂ., ತಾ.ಪಂ., ಜಿ.ಪಂ., ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸಹಿತ ಸ್ಥಳೀಯ ಸಂಸ್ಥೆಗಳ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕೇಂದ್ರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಸುಳಿವು ನೀಡಿದ್ದಾರೆ.

ಪಕ್ಷದ ಕಾರ್ಯಕ್ರಮವಲ್ಲ

ಕೇಂದ್ರ ಸರಕಾರದ ಈ ಸಾಧನಾ ಸಮಾವೇಶವು ಬಿಜೆಪಿಯ ಕಾರ್ಯಕ್ರಮವಾಗಿರದೆ, ಸಮಗ್ರ ಕೊಡಗಿನ ಅಭಿವೃದ್ಧಿ ಸಲುವಾಗಿ ಪಕ್ಷಾತೀತವಾಗಿ ಜಿಲ್ಲಾ ಆಡಳಿತದೊಂದಿಗೆ ಎಲ್ಲರ ಸಹಕಾರದಿಂದ ನಡೆಯಲಿರುವ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದ ಮನು ಮುತ್ತಪ್ಪ, ತಾನು ಕೇವಲ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಮಾವೇಶದಲ್ಲಿ ತೊಡಗಿಸಲು ಸಂಯೋಜಕನಾಗಿ ನಿಯುಕ್ತಿಗೊಂಡಿರುವದಾಗಿ ಮಾಹಿತಿ ನೀಡಿದರು.