ಮಡಿಕೇರಿ, ಜೂ.16 : ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆಯನ್ನು ನೀಡಬೇಕೆಂದು ಒತ್ತಾಯಿಸಿ ತಾ.19 ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಕೊಡಗು ಜಿಲ್ಲಾ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಪಿ.ಆರ್. ಭರತ್, ಸರ್ಕಾರ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರನ್ನು ಕಡೆಗಣಿಸಿದ್ದು, ಅನೇಕ ವರ್ಷಗಳಿಂದ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ, ಹೆರಿಗೆ ಭತ್ಯೆ, ಗ್ರಾಚ್ಯುಟಿ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರದಿಂದ ಕನಿಷ್ಟ ವೇತನ ಕೊಡಿಸುವದಾಗಿ ಆಮಿಷವೊಡ್ಡಿದ ಕೆಲವರು ಗ್ರಂಥಾಲಯ ಮೇಲ್ವಿಚಾರಕ ರಿಂದ ತಲಾ 10 ಸಾವಿರ ರೂ. ಸಂಗ್ರಹಿಸಿ 3 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಲೂಟಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸರಕಾರ ತನಿಖೆಗೆ ಆದೇಶ ಮಾಡಿಲ್ಲ ವೆಂದು ಟೀಕಿಸಿದ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಸುಮಾರು 6 ಸಾವಿರಕ್ಕೂ ಹೆಚ್ಚಿನ ಗ್ರಂಥಾಲಯಗಳಿದ್ದು, ಇಲ್ಲಿಯವರೆಗೆ ಯಾವದೇ ಮೂಲಭೂತ ಸೌಲಭ್ಯವನ್ನು ಸರ್ಕಾರ ನೀಡಿಲ್ಲ. ಈ ಕಾರಣದಿಂದ ಗ್ರಂಥಾಲಯ ಮೇಲ್ವಿಚಾರಕರ ಸಂಘವು ಸಿಐಟಿಯು ಸಂಯೋಜನೆಯೊಂದಿಗೆ ತಾ.19 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮುಖ್ಯ ಗ್ರಂಥಾಲಯದ ಎದುರು ಧರಣಿ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಿದೆ ಎಂದರು.

ತಾ.19 ರಂದು ಬೆಳಗ್ಗೆ ನಗರದ ಬಾಲಭವನದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾ ಸಮಾವೇಶ ನಡೆಯಲಿದೆಯೆಂದು ಸಂಘದ ಪ್ರಮುಖರು ಇದೇ ಸಂದರ್ಭ ಮಾಹಿತಿ ನೀಡಿದರು. ಕಾರ್ಯಕ್ರಮ ವನ್ನು ಸಾಹಿತಿ ಭಾರದ್ವಾಜ್ ಉದ್ಘಾಟಿಸಲಿದ್ದು, ಗ್ರಾಮ ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಹಿರಿಯ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟಿ, ಬಿಎಸ್‍ಎನ್‍ಎಲ್ ನೌಕರರ ಸಂಘದ ಅಧ್ಯಕ್ಷ ಅಂಥೋಣಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಾವೇರಮ್ಮ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಸಿ.ಜೆ.ಲೀಲಾವತಿ, ಎಂ,ಎ. ಜಲಜಾಕ್ಷಿ, ಹೆಚ್.ಎ.ವಸಂತಿ, ಎಂ.ಜಿ.ಮೊಣ್ಣಪ್ಪ ಹಾಗೂ ಎ.ಹೆಚ್. ಪುರುಷೋತ್ತಮ ಉಪಸ್ಥಿತರಿದ್ದರು.