ಮಡಿಕೇರಿ, ಜೂ.16: ತಾ. 21 ರಂದು ನಡೆಯುವ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾ. 18 ರಂದು ಬೆಳಗ್ಗೆ 7 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಜಾಥಾ ನಡೆಯಲಿದೆ. ನಗರದ ಗೌಳಿಬೀದಿ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂದಿರಾಗಾಂಧಿ ಸರ್ಕಲ್ (ಚೌಕಿ), ಮಹದೇವಪೇಟೆ ಮಾರ್ಗ ಬಸ್ ನಿಲ್ದಾಣ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರ್ಟ್ ಆಫ್ ಲಿವಿಂಗ್, ನೆಹರು ಯುವಕ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಶಾಲಾ ಮಕ್ಕಳು ಇತರೆ ಯೋಗ ಸಂಬಂಧಿತ ಪದಾಧಿಕಾರಿಗಳು, ಯೋಗ ಬಂಧುಗಳು, ಅಶ್ವಿನಿ ಆಸ್ಪತ್ರೆಯ ವೈದ್ಯ, ಸಿಬ್ಬಂದಿ, ವಿಶ್ವ ಹಿಂದೂ ಪರಿಷತ್ ಪ್ರಮುಖರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

ಯೋಗದಿಂದ ಶಾರೀರಿಕ ದೃಢತೆ, ಮಾನಸಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯದ ಬದುಕು ಉಂಟಾಗುವದರಿಂದ, ಯೋಗವು ಅನೇಕ ರೋಗಗಳಿಗೆ ಚಿಕಿತ್ಸೆಯಾಗಿಯೂ, ರೋಗ ಬರದಂತೆ ತಡೆಗಟ್ಟಲೂ ಕೂಡ ಸಹಕಾರಿ. ತಾ. 21 ರಂದು ಬೆಳಗ್ಗೆ 6.30 ರಿಂದ 9.30 ರವರೆಗೆ 3ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯು ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.