ಮಡಿಕೇರಿ, ಜೂ. 17 : ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ನೀಡಲು ಜಿಲ್ಲಾಡಳಿತ ಮುಂದಾಗಿರುವದು ಸ್ವಾಗತಾರ್ಹ. ಆದರೆ ಲೈನ್‍ಮನೆಗಳಲ್ಲಿ ವಾಸವಿರುವ ಪರಿಶಿಷ್ಟ ಜಾತಿಯವರಿಗೂ ಇದೇ ಸೌಲಭ್ಯವನ್ನು ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಳ ಲೈನ್‍ಮನೆಗಳಲ್ಲಿ ತಲತಲಾಂತರದಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿ ರುವ ಸಾವಿರಾರು ಕುಟುಂಬಗಳಿದ್ದು, ಅವರು ಕೂಡ ನಿವೇಶನ ಹಾಗೂ ವಸತಿ ರಹಿತರಾಗಿದ್ದಾರೆ. ಆದ್ದರಿಂದ ಅವರಿಗೂ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಮತ್ತೊಂದೆಡೆ 94ಸಿ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಸಮರ್ಪಕವಾಗಿ ವಿಲೇವಾರಿಯಾಗದೆ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅಂತಹ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಗಳು ಕ್ರಮಕೈಗೊಳ್ಳಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಗಳು ಅಭಿವೃದ್ಧಿ ಯಾಗದೆ ರಸ್ತೆ, ಮೋರಿ, ಚರಂಡಿ ವ್ಯವಸ್ಥೆ ಇನ್ನಿತರ ಮೂಲ ಭೂತ ಸೌಕರ್ಯಗಳಿಂದ ವಂಚಿತ ವಾಗಿದ್ದು, ಪರಿಶಿಷ್ಟರಿಗೆ ಮೀಸಲಾದ ಅನುದಾನ ಗಳು ಕಾಲೋನಿಗಳಿಗೆ ತಲುಪುತ್ತಿಲ್ಲ ಎಂದು ಮುತ್ತಪ್ಪ ಆರೋಪಿಸಿದರು.

ಗರಗಂದೂರಿನ ‘ಎ’ ಮಲ್ಲಿಕಾರ್ಜುನ ಕಾಲೋನಿ, ಐಗೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನ ಪರಿಶಿಷ್ಟ ಜಾತಿ ಕಾಲೋನಿ ಯಲ್ಲಿ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯ ವಾಗಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಅಲ್ಪಸ್ವಲ್ಪ ಅನುದಾನವನ್ನು ಮಾತ್ರ ಮೀಸಲಿಡಲಾಗುತ್ತಿದ್ದು, ಆ ಹಣವನ್ನೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ. ಗಣೇಶ್ ಹಾಜರಿದ್ದರು.