ಸೋಮವಾರಪೇಟೆ, ಜೂ. 16: ಎತ್ತ ನೋಡಿದರತ್ತ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೃಹತ್ ಬೆಟ್ಟ..,ನಡುವೆ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂದು ಭಾಸವಾಗುವ ಜಲಧಾರೆಯ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ಮುಂಗಾರು ಮಳೆಗೆ ಮೈದಳೆದಿರುವ ಜಲಕನ್ಯೆಯಂತೆ ಗೋಚರಿಸುತ್ತದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಮಲ್ಲಳ್ಳಿ ಜಲಪಾತ ದಿನದಿಂದ ದಿನಕ್ಕೆ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಮಳೆಗಾಲ ಪ್ರಾರಂಭದಿಂದ ಹಿಡಿದು ಜನವರಿ ತಿಂಗಳವರೆಗೂ ಹಾಲ್ನೊರೆ ಸೂಸುತ್ತಾ, ಸುಮಾರು 200 ಅಡಿಗೂ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಈ ಜಲಪಾತ ನಿಜಕ್ಕೂ ಪ್ರವಾಸಿಗರ ಸ್ವರ್ಗವಾಗಿದೆ. ನ್ಯೆಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ಸಹಜ ಸೌಂದರ್ಯ ಹೊಂದಿರುವ ಜಲಪಾತ ಇದಾಗಿದೆ.