ಮಡಿಕೇರಿ, ಜೂ 17: ಮಡಿಕೇರಿ ನಗರಸಭೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ನಗರೋತ್ಥಾನ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆಗೊಂಡಿರುವ ವಿಶೇಷ ಅನುದಾನದಲ್ಲಿ ಇಂದಿರಾ ಗಾಂಧಿ ವೃತ್ತದಿಂದ ಮಹದೇವಪೇಟೆ ಮುಖ್ಯ ರಸ್ತೆಯ ಕಾಮಗಾರಿಗೆ ರೂಪಾಯಿ 1.80 ಕೋಟಿ ಹಣ ಕಲ್ಪಿಸಿದ್ದು, ಈ ಕಾಮಗಾರಿ ಶೀಘ್ರ ಪ್ರಾರಂಭಿಸಿದರೆ ಜನತೆಗೆ ಉಪಕಾರವಾದೀತು.

ನಗರಸಭೆಯಿಂದ ರೂಪಿಸಿರುವ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ಮಹದೇವಪೇಟೆ ರಸ್ತೆಯ ಚರಂಡಿಗಳಿಗೆ ಉಭಯ ಕಡೆಗಳಲ್ಲಿ ಕವರ್ ಸ್ಲ್ಯಾಬ್ ಅಳವಡಿಕೆ ಮತ್ತು ಸಾರ್ವಜನಿಕ ಉಪಯೋಗ ಕ್ಕಾಗಿ ಸುಸಜ್ಜಿತ ಫುಟ್‍ಪಾತ್ ನಿರ್ಮಾಣವೆಂದು ತೋರಿಸಲಾಗಿದೆ. ಅಲ್ಲದೆ ಈ ಕಾಮಗಾರಿಗಾಗಿಯೇ ರೂಪಾಯಿ 1 ಕೋಟಿ ಹಣವನ್ನು ಮೀಸಲಿರಿಸಿರುವದಾಗಿ ಲೆಕ್ಕ ತೋರಿಸಲಾಗಿದೆ. ಹೀಗಿದ್ದು ಕೂಡ ಇಲ್ಲಿ ಮುಂಗಾರು ಪ್ರವೇಶವಾಗಿದ್ದರೂ ಕೂಡ ಅಂತಹ ಯಾವದೇ ಕೆಲಸವನ್ನು ನಗರಸಭೆ ಇನ್ನೂ ಕೈಗೆತ್ತಿಕೊಂಡಂತೆ ಕಾಣುವದಿಲ್ಲ.

ಬದಲಾಗಿ ತನ್ನದೇ ಇತಿಹಾಸ ಹೊಂದಿರುವ ಮಹದೇವಪೇಟೆಯು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುವ ಪ್ರಮುಖ ವಾರದ ಸಂತೆ ಇದೇ ಪೇಟೆ ಮಧ್ಯೆ ನಡೆಯುವದಲ್ಲದೇ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರ ಕೂಡ ಮಹದೇವಪೇಟೆಯಾಗಿದೆ. ಇಂತಹ ಮಹದೇವಪೇಟೆಯನ್ನು ಇತ್ತೀಚೆಗಷ್ಟೇ ಎಲ್ಲರ ವಿರೋಧದ ನಡುವೆಯೂ ರಸ್ತೆ ಅಗಲೀಕರಣ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ಒಡೆದು ಹಾಕಲಾಯಿತು.

ಪರಿಣಾಮ 250 ವರ್ಷಗಳ ಹಿಂದಿನ ಇತಿಹಾಸದ ಮಹದೇವಪೇಟೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವಂತಾಯಿತು. ಸ್ವತಃ ಏರ್ ಮಾರ್ಷಲ್ (ನಿವೃತ್ತ) ಕೆ.ಸಿ. ಕಾರ್ಯಪ್ಪ ಅವರು ಹೇಳುವಂತೆ ‘ಕೊಡಗು ಜಿಲ್ಲಾ ಕೇಂದ್ರದಲ್ಲಿ ಪುಟ್ಟ ಪುಟ್ಟ ಮನೆ, ಮಳಿಗೆಗಳಿಂದ ಕೂಡಿದ್ದ ಈ ಹಳೆಯ ಪೇಟೆಯು ಕಿರಿದಾದ ರಸ್ತೆಯೊಂದಿಗೆ ತನ್ನ ಮೂಲ ರೂಪದಲ್ಲೇ ಇರಬೇಕಿತ್ತು’.

ಆದರೂ ಅಭಿವೃದ್ಧಿಯ ಹೆಸರಿನಲ್ಲಿ ನಗರಸಭೆಯು ಈ ಹಳೆಯ ಪೇಟೆಯನ್ನು ಒಡೆದು ಹಾಕುವಲ್ಲಿ ತೋರಿದ ವೀರಾವೇಶದ ಕೆಲಸವನ್ನು ಅದೇ ಪೇಟೆಯ ಪುನರ್ ನಿರ್ಮಾಣ ವೇಳೆ ಆಸಕ್ತಿ ಅಥವಾ ಕಾಳಜಿ ತೋರಿದಂತಿಲ್ಲ. ಆ ಸಲುವಾಗಿಯೇ ಕೋಟ ಕೋಟಿ ರೂಪಾಯಿ ಖರ್ಚು ಮಾಡಿರುವ ಬಗ್ಗೆ ದಾಖಲೆಗಳಲ್ಲಿ ಲೆಕ್ಕ ತೋರಿಸಿದ್ದರೂ ಕನಿಷ್ಟ ಮೂಲಭೂತ ಸೌಲಭ್ಯ ಮರು ಕಲ್ಪಿಸುವಲ್ಲಿ ವಿಫಲಗೊಂಡಂತಿದೆ. ಪ್ರಸಕ್ತ ಮುಂಗಾರು ಅಡಿಯಿಟ್ಟಿದ್ದರೂ ಫುಟ್‍ಪಾತ್ ನಿರ್ಮಾಣ ಕಾಮಗಾರಿ ನಿರ್ವಹಿಸದ ಪರಿಣಾಮ ಪ್ರತಿಷ್ಠಿತ ವ್ಯಾಪಾರ ಮಳಿಗೆಗಳಿಗೆ ಬರುವ ಗ್ರಾಹಕರು ರಸ್ತೆಯ ಕೆಸರನ್ನು ಅಂಗಡಿಗಳಲ್ಲಿ ಹರಡುವಂತಾಗಿದೆ.

ಸುಸಜ್ಜಿತ ಚರಂಡಿ ಹಾಗೂ ಮೇಲುಹಾಸು ಸಹಿತ ಪಾದಾಚಾರಿಗಳ ಓಡಾಟಕ್ಕೆ ಸಮರ್ಪಕ ಫುಟ್‍ಪಾತ್ ಕೆಲಸ ಪೂರೈಸದ ಹಿನ್ನೆಲೆ, ಹಾದು ಹೋಗುವ ವಾಹನಗಳಿಂದ ರಾಚುವ ಕೊಳಕು ದಾರಿ ಹೋಕರ ಮೈಗೆಲ್ಲ ಹಾರುವಂತಾಗಿದೆ.

ಹೀಗಾಗಿ ಮಹದೇವಪೇಟೆ ಫುಟ್‍ಪಾತ್ ನಿರ್ಮಾಣಕ್ಕಾಗಿಯೇ ಮೀಸಲಿಟ್ಟಿರುವ ರೂ. 1 ಕೋಟಿ ಹಾಗೂ ಇಂದಿರಾ ಗಾಂಧಿ ವೃತ್ತ ಅಭಿವೃದ್ಧಿ (?) ಹೆಸರಲ್ಲಿ ಮೀಸಲಿಟ್ಟಿರುವ ರೂ. 80 ಲಕ್ಷ ಹಣ ಮಳೆ ನೀರಿನಲ್ಲಿ ಕೊಚ್ಚಿ ಹೋಗುವ ಮುನ್ನ ಈ ಜನೋಪಕಾರಿ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಜನಪ್ರತಿನಿಧಿಗಳು ಮತ್ತು ನಗರಸಭಾ ಅಧಿಕಾರಿಗಳು ಮುತುವರ್ಜಿ ತೋರಬೇಕಿದೆ.

- ಶ್ರೀಸುತ