ಸೋಮವಾರಪೇಟೆ, ಜೂ. 17: ಕಿಬ್ಬೆಟ್ಟ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯನ್ನು ಕೆರೆಯೊಂದು ಗುಳುಂ ಮಾಡಲು ಹೊರಟಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು ಕಂದಾಯ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಕುರುಡರಾದಂತೆ ಕಂಡುಬರುತ್ತಿದ್ದಾರೆ!

ಕಿಬ್ಬೆಟ್ಟ ಗ್ರಾಮದ ವ್ಯಕ್ತಿಯೋರ್ವರು ತೀರಾ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಕೆರೆ ಕಾಮಗಾರಿ ಸಾರ್ವಜನಿಕ ರಸ್ತೆಯನ್ನೇ ಅಪೋಶನ ಮಾಡಿಕೊಳ್ಳುವತ್ತ ಮುನ್ನುಗ್ಗುತ್ತಿದೆ. ಕೆರೆಯ ಏರಿ ರಸ್ತೆಯ ಬುಡಕ್ಕೆ ಬಂದುನಿಂತಿದ್ದು, ಕೆಲವೇ ದಿನಗಳಲ್ಲಿ ರಸ್ತೆಯನ್ನು ನುಂಗಲು ಹವಣಿಸುತ್ತಿದೆ. ಈ ರಸ್ತೆ ಕುಸಿದರೆ ಸುಮಾರು 60ಕ್ಕೂ ಅಧಿಕ ಮನೆಗಳಿಗೆ ತೆರಳುವ ಪ್ರಮುಖ ಮಾರ್ಗ ಬಂದ್ ಆಗಲಿದೆ.

ಮಳೆಗಾಲದಲ್ಲಿ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ಒಂದು ವೇಳೆ ರಸ್ತೆ ಕುಸಿದರೆ, ರಾಜ್ಯ ಸರ್ಕಾರದಿಂದ ಶೌರ್ಯ ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿನಿ ಕೆ.ಎಂ.ಶಾಂತಿ ಮನೆಯೂ ಕೆರೆಪಾಲಾಗುವ ಸಂಭವವಿದೆ.

ಕಳೆದ ವರ್ಷ ಕೆರೆ ಕಾಮಗಾರಿ ಪ್ರಾರಂಭವಾದಾಗ ಅನೇಕರು ವಿರೋಧ ವ್ಯಕ್ತಪಡಿಸಿ ಚೌಡ್ಲು ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಕ್ರಮಕೈಗೊಳ್ಳಲು ಧೈರ್ಯ ಮಾಡಿಲ್ಲ.

ಪರಿಣಾಮ ಕೂಲಿ ಕಾರ್ಮಿಕ ಕುಟುಂಬದ ಮನೆಗಳು ಬಿರುಕು ಬಿಟ್ಟಿದ್ದು, ಆತಂಕಗೊಂಡಿರುವ ನಿವಾಸಿಗಳು ತಹಶೀಲ್ದಾರರಿಗೆ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಹೀಗಿದ್ದೂ ನಿರ್ಲಕ್ಷ್ಯ ತಳೆದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.