ಮಡಿಕೇರಿ, ಜೂ. 17: ಈ ಕ್ಷಣಕ್ಕೂ ತಾವು ಕಾಂಗ್ರೆಸ್ ಪಕ್ಷದಲ್ಲಿದ್ದು, ತಮ್ಮ ಬೆಂಬಲಿಗರು, ಹಿತೈಷಿಗಳ ಅಭಿಪ್ರಾಯ ಕ್ರೋಢೀಕರಿಸಲು ಪ್ರವಾಸ ಹಮ್ಮಿಕೊಂಡಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಮಾಜೀ ಸಂಸದ ಅಡಗೂರು ಹೆಚ್. ವಿಶ್ವನಾಥ್ ಘೋಷಿಸಿದ್ದಾರೆ.ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತಮ್ಮ ವಿಶ್ವಾಸಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಪಕ್ಷ ಕಟ್ಟುವ ಕೆಲಸದೊಂದಿಗೆ ಜನತೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕ ನೆಲೆಯಲ್ಲಿ ನಿಭಾಯಿಸಿರುವೆ ಎಂದು ಸಮರ್ಥನೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹೇಳುವವರು ಅಥವಾ ಕೇಳುವವರಿಲ್ಲದ ಅನಿವಾರ್ಯ ಪರಿಸ್ಥಿತಿಯಲ್ಲಿ ತಾವು ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದು, ಈ ಕ್ಷೇತ್ರದ ಮಾಜಿ ಸಂಸದ ಹಾಗೂ ಓರ್ವ ಹಿರಿಯ ಕಾಂಗ್ರೆಸ್ಸಿಗನಾಗಿ ಸಭೆ ಕರೆದರೆ ಹೋಗಬೇಡಿ ಎನ್ನುವವರು ತಾವು ಎಲ್ಲಿಂದ ಬಂದು, ಯಾರಿಂದ ಅಧಿಕಾರ ಅನುಭವಿಸುತ್ತಿದ್ದೀರಿ ಎಂದು ನೋಡಿಕೊಳ್ಳಿ ಎಂದು ಜಿಲ್ಲೆಯ ಮುಖಂಡರಿಗೆ ತಿರುಗೇಟು ನೀಡಿದರು.

ಅತೃಪ್ತರ ಧ್ವನಿ: ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಡೆ ಕಾಂಗ್ರೆಸ್ಸಿನ ಸೈದ್ಧಾಂತಿಕ ವ್ಯವಸ್ಥೆಗೆ ವಿರುದ್ಧವಿದ್ದು, ಈ ಬಗ್ಗೆ ನೈಜ ಕಾಂಗ್ರೆಸ್ಸಿಗರು ತೀವ್ರ ಅಸಮಾಧಾನ ಗೊಂಡಿದ್ದಾರೆ

(ಮೊದಲ ಪುಟದಿಂದ) ಎಂದು ಬೊಟ್ಟು ಮಾಡಿದ ವಿಶ್ವನಾಥ್, ಈ ಅತೃಪ್ತರ ಧ್ವನಿಯಾಗಿ ತಾವು ಮಾತನಾಡುತ್ತಿರುವದಾಗಿ ಗುಡುಗಿದರು.

ಮುಂದಿನ ಡಿಸೆಂಬರ್ ವೇಳೆಗೆ ಬಹಳಷ್ಟು ನಾಯಕರು ಅಸಮಾಧಾನ ಹೊರಹಾಕಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಸಹಿತ ಅಖಿಲ ಭಾರತ ನಾಯಕರು ಸಿದ್ಧರಾಮಯ್ಯ ಎದುರು ಅಸಹಾಯಕರಾಗಿದ್ದಾರೆ ಎಂದು ಅಸಮಾಧಾನ ಹೊರಗೆಡವಿದರು.

ಘನತೆಯಿಲ್ಲ: ರಾಜ್ಯದ ಮುಖ್ಯಮಂತ್ರಿಯಾಗಿ ಘನತೆಯಿಲ್ಲದ ಸಿದ್ಧರಾಮಯ್ಯ, ಅಧಿಕಾರದಿಂದ ಎಲ್ಲರನ್ನೂ ಏಕವಚನದಲ್ಲಿ ಸಂಬೋಧಿಸುತ್ತಾ, ಪಕ್ಷದ ನಿಷ್ಠಾವಂತರು ಹತ್ತಿರವೂ ಸುಳಿಯದಂತೆ ವರ್ತಿಸುತ್ತಾ, ಕಾರ್ಯಕರ್ತರಿಗೆ ನೋವು ತಂದಿದ್ದಾರೆ ಎಂದು ವಿಶ್ವನಾಥ್ ಕಿಡಿಕಾರಿದರು.

ದಂಧೆನಿರತರು: ಮೈಸೂರಿನಲ್ಲಿ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಮಕ್ಕಳ ಮರಳು ದಂಧೆಯಿಂದ ಸಾಮಾನ್ಯರಿಗೆ ಮನೆಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ ಅವರು, ಕೇರಳಕ್ಕೆ ಇಂತಹವರ ಬೆಂಗಾವಲಿನಲ್ಲಿ ನಿತ್ಯ ಮರಳು ದಂಧೆ ಸಾಗಿದೆ ಎಂದು ಬೊಟ್ಟು ಮಾಡಿದರು.

ಎಲ್ಲ ಹಂತದಲ್ಲಿ ಪ್ರಾಮಾಣಿಕ ಕಾಂಗ್ರೆಸ್ಸಿಗರನ್ನು ತುಳಿಯುವ ಯತ್ನದೊಂದಿಗೆ ಮೂಲೆಗುಂಪು ಮಾಡಿರುವ ಹುನ್ನಾರ ವಿರುದ್ಧ ತಾವು ಸಿಡಿದೇಳುವಂತಾಗಿದ್ದು, ರಾಜ್ಯ ಸರಕಾರದ ನಡೆಯಿಂದ ಬೇಸತ್ತಿರುವ ಕಾರ್ಯಕರ್ತರನ್ನು ಸಂತೈಸುವ ಕೆಲಸ ಮಾಡುತ್ತಿರುವದಾಗಿ ಮಾರ್ನುಡಿದರು.

ತಿರುಗೇಟು: ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರ ಸಹಿತ ಜಿಲ್ಲೆಯಲ್ಲಿ ಗೂಟದ ಕಾರುಗಳಲ್ಲಿ ಸಂಚರಿಸುವವರು ಅಂತಹ ಸ್ಥಾನಮಾನ ಲಭ್ಯವಾಗಿದ್ದು ಯಾರಿಂದ ಎಂದು ಒಮ್ಮೆ ಎದೆಮುಟ್ಟಿ ನೋಡಿಕೊಳ್ಳಿ ಎಂದ ವಿಶ್ವನಾಥ್, ಕಾಂಗ್ರೆಸ್ಸಿಗನಾಗಿ ಕರೆದ ಸಭೆಗೆ ತಡೆಯಲು ನೀವ್ಯಾರು? ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಯಾರಿದ್ದಾರೆ ಎಂದು ಪ್ರಶ್ನಿಸಿದ ಅವರು, ದಿಗ್ವಿಜಯ ಸಿಂಗ್‍ರಂತಹ ವೀಕ್ಷಕರು ‘ಸೂಟ್‍ಕೇಸ್' ದಂಧೆ ನಡೆಸಿದರೆ, ಮಂತ್ರಿ ಮಹೋದಯರ ಪುತ್ರರು ಮರಳು, ಭೂ ಮಾಫಿಯಾ, ಗಣಿಗಾರಿಕೆ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ತೊಡಗಿ ರುವಾಗ, ಪ್ರಾಮಾಣಿಕ ಕಾಂಗ್ರೆಸ್ಸಿಗರಿಗೆ ಜಾಗವಿಲ್ಲವೆಂದು ವಿಷಾದಿಸಿದರು.

ಬಸವರಾಜ್ ಬೆಂಬಲ : ಮಾಜಿ ಶಾಸಕ ಹೆಚ್.ಡಿ. ಬಸವರಾಜ್ ಮಾತನಾಡಿ, ಹಿರಿಯ ನಾಯಕ ಅಡಗೂರು ಹೆಚ್. ವಿಶ್ವನಾಥ್ ಎಲ್ಲಿರುತ್ತಾರೋ ಅಲ್ಲಿ ತಾನಿರುವದಾಗಿ ಘೋಷಿಸಿದರು. ವಿಶ್ವನಾಥ್ ಅವರಿಗೆ ಈ ಪರಿಸ್ಥಿತಿಯಾದರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನೆ ಮುಂದಿಡುತ್ತಾ, ಕೊಡಗಿನ ಪ್ರಾಮಾಣಿಕ ಕಾರ್ಯಕರ್ತರು ಸದಾ ಜತೆಯಿರುವದಾಗಿ ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತರು: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎ. ಆದಂ ಮಾತನಾಡಿ, ಪ್ರಾಮಾಣಿಕ ನಾಯಕರಾದ ವಿಶ್ವನಾಥ್ ಅವರೊಂದಿಗೆ ನೊಂದ ಅಲ್ಪಸಂಖ್ಯಾತರು ಸದಾ ಇರಲಿದ್ದು, ಮಾಜಿ ಸಂಸದರಿಗೆ ಕಾಂಗ್ರೆಸ್ ವರಿಷ್ಠರು ಸೂಕ್ತ ಸ್ಥಾನಮಾನ ನೀಡಿದರೆ ತಾವೆಲ್ಲರು ಪಕ್ಷದಲ್ಲೇ ಮುಂದುವರಿಯುವದಾಗಿ ತಿಳಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಕೆ.ಎಂ. ಗಣೇಶ್ ಪ್ರಾಸ್ತಾವಿಕ ನುಡಿಯೊಂದಿಗೆ, ಜಿಲ್ಲಾ ಕಾಂಗ್ರೆಸ್ಸಿನ ಕೆಲವರು ಜೀವ ತೆಗೆಯಬಹುದು ಎಂದು ಆಕ್ರೋಶ ಹೊರಗೆಡವುತ್ತಾ, ಎಲ್ಲಿಂದಲೋ ಬಂದು ಪ್ರಾಮಾಣಿಕ ಕಾಂಗ್ರೆಸ್ಸಿಗರನ್ನು ಕೀಳುಭಾಷೆಯಲ್ಲಿ ಅಪಮಾನಿಸುವದನ್ನು ಸಹಿಸಿಕೊಂಡು ಕೂರುವದಲ್ಲ ಎಂದು ಎಚ್ಚರಿಸಿದರು. ಹೀಗಾಗಿ ಮಾಜಿ ಸಂಸದ ಹಾಗೂ ಪಕ್ಷದ ನಾಯಕ ವಿಶ್ವನಾಥ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರ ಬೆಂಬಲಿಗರೆಲ್ಲರು ಬದ್ಧರೆಂದು ಗಣೇಶ್ ಹಾಗೂ ಹಿತೈಷಿಗÀಳು ಕೈ ಎತ್ತಿ ಘೋಷಣೆ ಮಾಡುವ ಮೂಲಕ ಸಭೆಯ ಸಮ್ಮತಿ ಸೂಚಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷರು ಗಳಾದ ಶ್ರೀಮತಿ ಬಂಗೇರ, ಜುಲೇಕಾಬಿ, ಸದಸ್ಯೆ ವೀಣಾಕ್ಷಿ, ಕಾಂಗ್ರೆಸ್ ಮುಖಂಡರಾದ ಬಿ.ಟಿ. ನಂಜಪ್ಪ, ಬಿ.ಡಿ. ನಾರಾಯಣ ರೈ, ಕ್ಲಾಡಿ ಲೋಬೋ, ಕೆ.ಇ. ಮ್ಯಾಥ್ಯೂ, ಸುರಯ್ಯಾ ಅಬ್ರಾರ್, ಸುನಿಲ್ ನಂಜಪ್ಪ, ಬಿ.ಟಿ. ಸುಂದರ, ಜಾನ್ಸನ್, ಅಬ್ದುಲ್ ರೆಹಮಾನ್, ಶನಿವಾರಸಂತೆಯ ಸುರೇಶ್, ಸೂದನ ಈರಪ್ಪ, ಎಂ.ಕೆ. ಮಣಿ, ಕರೀಂ, ಸುನಿಲ್, ಸುಖೆÉೀಶ್ ಮೊದಲಾದವರು ಪಾಲ್ಗೊಂಡಿದ್ದರು. ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ವಂದಿಸಿದರು.