ಮಡಿಕೇರಿ, ಜೂ. 17: ಮಡಿಕೇರಿ ನಗರಸಭೆಯಲ್ಲಿ ಕಂದಾಯ ವಸೂಲಿ ಹಣ ರೂ. 60 ಲಕ್ಷಕ್ಕೂ ಅಧಿಕ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಇಬ್ಬರು ಅಮಾನತುಗೊಂಡಿದ್ದು, ಇಡೀ ಪ್ರಕರಣದಲ್ಲಿ ಹಲವರ ಕೈವಾಡ ದೊಂದಿಗೆ ಆರೋಪಿಗಳನ್ನು ರಕ್ಷಿಸಲು ತೆರೆಮರೆಯ ಕಸರತ್ತು ನಡೆಯುತ್ತಿರುವ ಕುರಿತು ಆರೋಪವಿದೆ.ನಗರಸಭೆ ಮೂಲಗಳ ಪ್ರಕಾರ ಈ ಹಿಂದೆ ವಿವಿಧ ಕಂದಾಯ ವಸೂಲಾತಿ ವೇಳೆ ಸಾರ್ವಜನಿಕರ ಹಣ ರೂ. 54,63,668 ಮೊತ್ತವನ್ನು ಸಜಿತ್ ಕುಮಾರ್ ಎಂಬಾತ ನಗರಸಭೆಗೆ ಪಾವತಿಸದೆ ವಂಚಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಲ್ಲದೆ ಇನ್ನೋರ್ವ ಸಿಬ್ಬಂದಿ ಸ್ವಾಮಿ ಎಂಬಾತ ರೂ. 5,96,192 ಮೊತ್ತ ವಂಚಿಸಿರುವ ಆರೋಪ ದೊಂದಿಗೆ ನಗರಸಭೆಯೊಳಗೆ ಸಾಕಷ್ಟು ಕಸರತ್ತು ನಡೆದು, ಆರೋಪಿಗಳನ್ನು ಅಮಾನತು ಗೊಳಿಸಿ ಕಾನೂನು ಕ್ರಮಕ್ಕೆ ತೀರ್ಮಾನಿಸಲಾಗಿತ್ತು.

ಹೀಗೆ ಮೇಲ್ನೋಟಕ್ಕೆ ರೂಪಾಯಿ 60,59,192 ಮೊತ್ತವನ್ನು ಇವರಿಬ್ಬರು ವಂಚಿಸಿದ್ದಾಗಿ ಆರೋಪಿಸಲಾಗಿತ್ತು.

ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಿ, ಬಳಿಕ ಉಪವಿಭಾಗಾಧಿಕಾರಿ ಮೂಲಕ ಸಮಗ್ರ ತನಿಖೆಗೆ ನಿರ್ದೇಶಿಸಿದ್ದರು.

ಅಲ್ಲದೆ ವಂಚನೆ ಪ್ರಕರಣ ಮೇಲ್ನೋಟಕ್ಕೆ ಸಾಬೀತು ಗೊಂಡಿದ್ದಾಗಿ ಅಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಅಭಿಪ್ರಾಯದೊಂದಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಇಂಗಿತ ವ್ಯಕ್ತಪಡಿಸಿದ್ದರು. ಈ ನಡುವೆ ಜಿಲ್ಲಾಧಿಕಾರಿ ವರ್ಗಾವಣೆಗೊಂಡರೆ, ತೆರೆಮರೆಯಲ್ಲಿ ಈ ವಂಚನೆ ಪ್ರಕರಣವನ್ನು ನಗರಸಭೆಯೊಳಗೆ ಕೆಲವರು ಮುಚ್ಚಿ ಹಾಕಲು ಯತ್ನಿಸುತ್ತಿರುವ ಬಗ್ಗೆ ಗುಸು ಗುಸು ಮಾತು ಕೇಳಿಬರತೊಡಗಿದೆ.

ಕಾರಣ ಮೇಲ್ನೋಟಕ್ಕೆ ಇಬ್ಬರು ಆರೋಪಿಗಳು ಅಮಾನತು ಗೊಂಡಿದ್ದರೂ, ಈ ಪ್ರಕರಣದಲ್ಲಿ ಶಾಮೀಲಾಗಿರುವ ಕೆಲ ಮಂದಿ ಕಚೇರಿ ಕೆಲಸದಲ್ಲಿದ್ದು, ದಾಖಲೆ ಗಳನ್ನು ನಾಶಗೊಳಿಸುವ ಯತ್ನ ದೊಂದಿಗೆ ಅಪರಾಧ ಹೊತ್ತವರನ್ನು ರಕ್ಷಿಸಲು ಹಾಗೂ ತಾವು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕರಾಮತ್ತು ನಡೆಸುತ್ತಿರುವದಾಗಿ ಕೆಲವೊಂದು ಮೂಲಗಳು ತಿಳಿಸಿವೆ.

ಮಾತ್ರವಲ್ಲದೆ ಈ ವಂಚನೆ ಪ್ರಕರಣದಲ್ಲಿ ನಗರಸಭೆಗೆ ಭಾರೀ ಹಣ ಬರಬೇಕಿದ್ದು, ಪ್ರಬಾವಿಗಳ ಕೈವಾಡದಿಂದ ಇಡೀ ಹಗರಣ ಮುಚ್ಚಿ ಹೋಗುವ ಸಂಶಯವನ್ನು ಸಂಬಂಧಿಸಿದ ಮೂಲಗಳು ವ್ಯಕ್ತಪಡಿಸಿವೆ.

ಇತ್ತ ನಗರಸಭೆಯ ಜವಾಬ್ದಾರಿಯುತರು ದಿಟ್ಟ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಇಂತಹ ಹಗರಣಗಳು ಮತ್ತೆ ಮತ್ತೆ ಮುಂದುವರಿಯಲು ಅವಕಾಶ ಕಲ್ಪಿಸಿದಂತಾಗಲಿದೆ ಎಂಬ ಗುಮಾನಿ ಹೊರಗೆಡವಿದ್ದಾರೆ.

- ಮಿರರ್