ವೀರಾಜಪೇಟೆ, ಜೂ. 17: ವೀರಾಜಪೇಟೆ ಬಳಿಯ ಅಂಬಟ್ಟಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಮೂರು ದನಗಳ ಮಾಲೀಕರಿಗೆ ತಕ್ಷಣ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ 7 ದಿನಗಳ ಗಡುವಿನಲ್ಲಿ ವೀರಾಜಪೇಟೆ ಚೆಸ್ಕಾಂ ಕಚೇರಿ ಮುಂದೆ ಗ್ರಾಮಸ್ಥರಿಂದ ಮುಷ್ಕರ ಹೂಡಲಾಗುವದು ಎಂದು ಗ್ರಾಮಸ್ಥ ಪಿ.ಆರ್. ದಾಮೋದರ್ ತಿಳಿಸಿದ್ದಾರೆ.

ಅಂಬಟ್ಟಿ ಗ್ರಾಮಸ್ಥರ ಪರವಾಗಿ ಇಲ್ಲಿನ ಪ್ರೆಸ್ ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಾಮೋದರ್ ಮೂರು ದಿನಗಳ ಹಿಂದೆ ಚೆಸ್ಕಾಂ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ. ಅಕಸ್ಮಾತ್ ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಕಂಬದಲ್ಲಿ ವಿದ್ಯುತ್ ಹರಿದಿದ್ದರೆ ಅನೇಕ ಮಕ್ಕಳು ದುರಂತದಲ್ಲಿ ಸಿಲುಕುವಂತಾಗುತಿತ್ತು. ದೇವರ ದಯೆಯಿಂದ ಇದು ತಪ್ಪಿದೆ. ಗಾಲ್ಫ್ ಗ್ರೌಂಡ್ ಬಳಿಯಲ್ಲಿಯೇ ಪ್ರಾಥಮಿಕ ಶಾಲೆ ಇದ್ದು ಇದರ ಪಕ್ಕದಲ್ಲಿಯೂ ಹೈಟೆನ್ಶನ್ ವಿದ್ಯುತ್ ಹರಿಯುವ ಕಂಬ ಶಿಥಿಲಗೊಂಡು ಬಾಗಿ ನಿಂತಿದೆ. ಈ ಕಂಬದಿಂದಲೂ ಶಾಲಾ ಮಕ್ಕಳಿಗೆ ದುರಂತ ಸಂಭವಿಸುವ ಸಾಧ್ಯತೆ ಇದೆ. ಈ ಸಂಬಂಧ ಚೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಯಾವದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮೂರು ದನಗಳನ್ನು ಕಳೆದುಕೊಂಡ ಅಂಬಟ್ಟಿ ಗ್ರಾಮದ ನಿವಾಸಿ ಬಿ.ಎಸ್. ಯೋಗೀಶ್ ಮಾತನಾಡಿ, ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಂಬಟ್ಟಿ ಗ್ರಾಮದಲ್ಲಿ ಇನ್ನು ಅನೇಕ ದುರಂತಗಳು ಸಂಭವಿಸುವ ಸಾಧ್ಯತೆ ಇದೆ. ಚೆಸ್ಕಾಂ ಇದಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಿ.ಎನ್. ರತನ್, ಅಮ್ಮಣಿಚಂಡ ರಂಜಿ, ಪಿ.ಎಂ. ರಾಮಚ್ಚ ಉಪಸ್ಥಿತರಿದ್ದರು.