ಸುಂಟಿಕೊಪ್ಪ, ಜೂ. 17: ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಸಂಭಾರಶೆಟ್ಟಿ ಕೆರೆಯಲ್ಲಿ ಕಲ್ಲುಗಳು ಕಾಣೆಯಾಗಿರುವ ಪ್ರಕರಣದಿಂದ ಗ್ರಾಮಸ್ಥರಲ್ಲಿ ಉಂಟಾಗಿದ್ದ ಸಂಶಯಕ್ಕೆ ಸುಖಾಂತ್ಯ ಕಂಡಿದೆ.

ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಸಂಭಾರಶೆಟ್ಟಿ ಕೆರೆಯ ಹೂಳೆತ್ತುವ ಕಾರ್ಯ ನಡೆದಿತ್ತು. ಈ ಸಂದರ್ಭದಲ್ಲಿ ಕೆರೆಗೆ ಹಾಕಲಾಗಿದ್ದ ಬ್ರಿಟೀಷ್ ಕಾಲದ ತಡೆಗೋಡೆಯ ಕಲ್ಲು ಕಾಣೆಯಾಗಿರುವ ಬಗ್ಗೆ ಎಚ್ಚೆತ್ತುಕೊಂಡ ಗ್ರಾಮಸ್ಥರು ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಈ ಕಲ್ಲುಗಳು ಇಲ್ಲಿನ ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಕುರಿತು ಗ್ರಾಮಸ್ಥರು ಪಿಡಿಓ, ಅಧ್ಯಕ್ಷರಿಗೆ ಮತ್ತೊಮ್ಮೆ ದೂರು ನೀಡಿ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಸಿದ್ದರು.

ಈ ಬಗ್ಗೆ ಯಾವದೇ ಪ್ರತಿಕ್ರಿಯೆ ಪಂಚಾಯಿತಿ ಕಡೆಯಿಂದ ಬಾರದಿದ್ದಾಗ ಗ್ರಾಮಸ್ಥರು ಅಸಮಾಧಾನಗೊಂಡಿದ್ದರು. ತಾ. 6 ರಂದು ನಡೆದ ಗ್ರಾಮಸಭೆಯಲ್ಲಿ ಸಂಬಾರಶೆಟ್ಟಿ ಕೆರೆ ಹೂಳೆತ್ತುವ ಕಾಮಗಾರಿ ಸಂದರ್ಭ ಆ ಕೆರೆಯಲ್ಲಿದ್ದ ಬ್ರಿಟೀಷರ ಕಾಲದ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಈ ಬಗ್ಗೆ ಪಂಚಾಯಿತಿಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗಿದೆ. ಪೊಲೀಸರಿಗೂ ದೂರು ನೀಡಿದ್ದೇವೆ. ಪಂಚಾಯಿತಿ ಕ್ರಮ ಕೈಗೊಂಡಿಲ್ಲವೆಂಬ ಆಕ್ರೋಶ ವ್ಯಕ್ತಗೊಂಡಿತ್ತು. ಈ ವೇಳೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಗ್ರಾಮದ ಸತ್ಯ ಎಂಬವರನ್ನು ವಿಚಾರಿಸಿದಾಗ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ಬಿಜು ಅವರ ಮನೆಯಲ್ಲಿ ಕಲ್ಲುಗಳನ್ನು ಹಾಕಿರುವದಾಗಿ ಗ್ರಾಮಸ್ಥರ ಸಮ್ಮುಖ ಒಪ್ಪಿಕೊಂಡಿದ್ದರು.

ಅದರಂತೆ ಗ್ರಾಮಸಭೆ ನಡೆದು 2 ದಿನಗಳ ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ, ಪೊಲೀಸರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು ಬಿಜು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಲ್ಲುಗಳು ಅಲ್ಲಿ ಇರುವದು ಗೋಚರಿಸಿತು.

ಆ ಕಲ್ಲುಗಳನ್ನು ಕೂಡಲೇ ಕೆರೆಯ ಬಳಿಯೇ ಇಡಬೇಕು ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚರಿಕೆಯನ್ನು ನೀಡಿತು. ಅದರಂತೆ ತಾನು ಇಟ್ಟುಕೊಂಡಿದ್ದ ಸಂಭಾರಶೆಟ್ಟಿ ಕೆರೆಯ 8 ಲೋಡುಗಳಷ್ಟು 2000 ಕಲ್ಲುಗಳನ್ನು ವಾಪಾಸು ನೀಡಿದಲ್ಲದೇ ಗ್ರಾಮಸ್ಥರಲ್ಲಿ ಸದಸ್ಯ ಪಿ.ಎಂ. ಬಿಜು ತಾನು ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಈ ಪ್ರಕರಣ ಸುಖಾಂತ್ಯ ಕಂಡು ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.