ಮಡಿಕೇರಿ, ಜೂ. 17: ಕೊಡವ, ಅರೆಭಾಷೆ ಹಾಗೂ ಬ್ಯಾರಿ ಭಾಷೆಗಳಿಗಾಗಿ ಪ್ರತ್ಯೇಕ ಸಾಹಿತ್ಯ ಅಕಾಡೆಮಿಗಳಿದ್ದರೂ ಈ ಭಾಷೆಗಳ ಲಿಪಿ ಕನ್ನಡ ಎಂಬದು ಗಮನಾರ್ಹ. ಆದರೆ ಈ ಭಾಷೆಗಳಲ್ಲಿ ಬರೆಯುತ್ತಿರುವವರು ಕನ್ನಡದಲ್ಲಿಯು ಬರವಣಿಗೆಯನ್ನು ಮುಂದುವರೆಸಬೇಕು. ಕೊಡವ, ಅರೆಭಾಷೆ, ಬ್ಯಾರಿ, ತುಳು ಭಾಷೆಗಳ ಬರಹಗಳು ಕನ್ನಡಕ್ಕೆ ಹಾಗೂ ಕನ್ನಡದ ಸಾಹಿತ್ಯ ಈ ಭಾಷೆಗಳಿಗೆ ಅನುವಾದಗೊಳ್ಳಬೇಕು. ಇಂತಹ ಕಾರ್ಯಗಳಿಂದ ಸಾಹಿತ್ಯದ ಜೊತೆ ಜೊತೆಗೆ ಸಾಂಸ್ಕøತಿಕ ಅಂಶಗಳ ವಿನಿಮಯವಾಗುವ ಕಾರಣ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಿದಂತಾಗಲಿದ್ದು, ಭಾಷಾ ಅಕಾಡೆಮಿಗಳು ಈ ಕುರಿತು ಗಮನ ಹರಿಸಬೇಕೆಂದು ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಬಿ.ಎ. ಷಂಶುದ್ದೀನ್ ಸಲಹೆಯಿತ್ತರು.

ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡಗಿನ ಬಗ್ಗೆ ಇರುವ ಅಪವಾದವೆಂದರೆ ಕೊಡಗಿನಲ್ಲಿ ಸಾಹಿತ್ಯದ ಕೃಷಿ ಮಾಡಿದವರು ಬಹಳ ಕಡಿಮೆ ಎಂಬದು. ಆದರೆ ನೂರಾರು ವರ್ಷಗಳ ಹಿಂದಿನಿಂದಲೂ ಕೊಡಗಿನಲ್ಲಿ ಸಾಹಿತ್ಯದ ಗಟ್ಟಿಯಾದ ನೆಲೆಗಟ್ಟು ಇತ್ತು ಎನ್ನುವದು ಬಹಳಷ್ಟು ಜನರಿಗೆ ತಿಳಿದಿಲ್ಲ. ಕೊಡಗು ಜಿಲ್ಲೆಯ ಪ್ರಾದೇಶಿಕ ವ್ಯಾಪ್ತಿ, ವಾತಾವರಣ, ಜನಸಂಖ್ಯೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಹೋಲಿಸುವದಾದರೆ ಕೊಡಗು ಸಾಹಿತ್ಯಿಕವಾಗಿಯೂ ಗಮನಾರ್ಹ ಕೊಡುಗೆ

(ಮೊದಲ ಪುಟದಿಂದ) ನೀಡಿದೆಯೆಂದು ಧೈರ್ಯದಿಂದ ಹೇಳಬಹುದು. ಸಾಹಿತ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ದೊಡ್ಡದು. ಶಾಲಾ-ಕಾಲೇಜುಗಳು ಕೃಷಿಗೆ ಫಲವತ್ತಾದ ಭೂಮಿ. ಶಿಕ್ಷಕರು, ಅದರಲ್ಲೂ ಆಯಾ ಸಂಸ್ಥೆಗಳ ಭಾಷಾ ಶಿಕ್ಷಕರು ಮನಸ್ಸು ಮಾಡಿದರೆ ಪ್ರತಿಯೊಂದು ಶಾಲಾ ಕಾಲೇಜಿನಲ್ಲೂ ಕನಿಷ್ಟ ಒಂದೆರಡು ಮಕ್ಕಳಾದರೂ ಸಾಹಿತ್ಯದತ್ತ ಮನಸ್ಸು ಮಾಡಲು ಸಾಧ್ಯವಾಗುತ್ತದೆ. ಆದರೆ ವಿಷಾದದ ಸಂಗತಿಯೆಂದರೆ ನಮ್ಮ ಶಿಕ್ಷಕ ವೃಂದದಲ್ಲಿಯೇ ಹೆಚ್ಚು ಮಂದಿಗೆ ಸಾಹಿತ್ಯದ ಬಗ್ಗೆ ನಿರಾಸಕ್ತಿ ಇರುವದು.

ಸಾಹಿತ್ಯ ಕಾರ್ಯಕ್ರಮಗಳಲ್ಲಿ ಶಿಕ್ಷಕರ ಭಾಗವಹಿಸುವಿಕೆ ಕಡಿಮೆಯಾಗು ತ್ತಿರುವದು ಇದನ್ನು ಪುಷ್ಟೀಕರಿಸುತ್ತದೆ. ಶಿಕ್ಷಕರಲ್ಲಿಯೂ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವದು ಒಳ್ಳೆಯ ಲಕ್ಷಣವಂತೂ ಅಲ್ಲ. ಶಿಕ್ಷಕರು ತಾವು ಬೌದ್ಧಿಕವಾಗಿ ಬೆಳೆದರೆ ಮಾತ್ರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕಾರಣ ನಾಗಬಲ್ಲರು. ಇಂತಹ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯಕ್ಕಿಂತ ಒಳ್ಳೆಯ ಸಾಧನ ಇಲ್ಲ.

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಈ ಹಿಂದೆ ಶಾಲೆಗಳಲ್ಲಿ ಮಾಡಲಾಗುತ್ತಿದ್ದ ಕೈಬರಹದ ಪತ್ರಿಕೆ, ಗೋಡೆ ಪತ್ರಿಕೆಗಳನ್ನು ಹೊರತರುವ ಚಟುವಟಿಕೆಯನ್ನು ಮತ್ತೆ ಆರಂಭಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕೆಲಸ ಮಾಡಬಹುದು ಎಂದರು.

ಭಾಷೆ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ ಅಂಶಗಳು. ಹೀಗಾಗಿ ಸಾಹಿತ್ಯದ ಬೆಳವಣಿಗೆ ಎಂದರೆ ಭಾಷೆಯ ಬೆಳವಣಿಗೆ. ಕನ್ನಡ ಭಾಷೆ ಬೆಳೆಯಬೇಕಾದರೆ ಕನ್ನಡ ಸಾಹಿತ್ಯ ಸಮೃದ್ಧಿಯಾಗಬೇಕು. ಸಾಹಿತ್ಯ ಸಮೃದ್ಧಿಯಾಗಬೇಕಾದರೆ ಸಾಹಿತ್ಯವನ್ನು ಓದುವವರು ಹೆಚ್ಚಾಗಬೇಕು. ಓದುವವರು ಹೆಚ್ಚಾಗಬೇಕಾದರೆ ಭಾಷೆಯ ಬಳಕೆ ಹೆಚ್ಚಾಗಬೇಕು. ಬಳಕೆ ಹೆಚ್ಚಾಗಬೇಕಾದರೆ ವ್ಯಾವಹಾರಿಕವಾಗಿ, ಆಡಳಿತಾತ್ಮಕವಾಗಿ ಆ ಭಾಷೆ ಜನರ ಭಾಷೆಯಾಗಬೇಕು.

ಪ್ರಸ್ತುತ ಕನ್ನಡದ ಸಂದರ್ಭದಲ್ಲಿ ಇದು ನಿಜವಾಗುತ್ತಿದೆಯೇ? ಉತ್ತರ ನಮಗೆಲ್ಲ ಗೊತ್ತು. ಆದರೂ ನಾವು ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಕನ್ನಡವನ್ನು ಉಳಿಸಲು ಬೊಬ್ಬೆ ಹೊಡೆಯುವ ಕೆಲಸವನ್ನು ಕನ್ನಡ ಹೋರಾಟಗಾರರಿಗೆ ಗುತ್ತಿಗೆ ಕೊಟ್ಟು ನಾವೆಲ್ಲ ಹಾಯಾಗಿ ಮಲಗಿಕೊಂಡಿದ್ದೇವೆ ಎಂದು ಷಂಶುದ್ದೀನ್ ವಿಷಾದಿಸಿದರು.

ಸರಕಾರಿ ಶಾಲೆ ಸೇರಿದಂತೆ ಎಲ್ಲ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಬೇಕು. ಕೇವಲ ಪರೀಕ್ಷಾ ದೃಷ್ಟಿಯಿಂದ ಪಾಠ ಮಾಡುವ, ಕಲಿಯುವ ಮನೋವೃತ್ತಿ ಬದಲಾಗಬೇಕು. ಬದಲಾಗಿ ವಿಷಯಜ್ಞಾನ ಒದಗಿಸುವ, ಪಡೆಯುವ ಮನೋಭಾವ ಬೆಳೆಯಬೇಕು. ನಮ್ಮ ಮಕ್ಕಳನ್ನು ಎಷ್ಟೇ ಕಷ್ಟಪಟ್ಟಾದರೂ ಆಂಗ್ಲ ಮಾಧ್ಯಮದಲ್ಲಿಯೇ ಓದಿಸಬೇಕೆಂಬ ಪೋಷಕರ ಮನೋಭಾವಕ್ಕೆ ಕಾರಣ ಇಂಗ್ಲೀಷ್ ಭಾಷೆಯನ್ನು ಒಂದು ‘ಸ್ಟೇಟಸ್’ ಎಂದು ಅನಗತ್ಯವಾಗಿ ಪರಿಗಣಿಸಿರು ವದು ಹಾಗೂ ಪ್ರಯೋಜನಕ್ಕೆ ಬಾರದ ಭಾಷೆ ಎಂಬ ರೀತಿಯಲ್ಲಿ ಕನ್ನಡವನ್ನು ಬಿಂಬಿಸುತ್ತಿರುವದು. ಇದಕ್ಕೆ ಕನ್ನಡದ ಸಾಹಿತಿಗಳೂ ಸೇರಿದಂತೆ ಎಲ್ಲ ಸುಶಿಕ್ಷಿತರೂ ಹೊಣೆಗಾರರಾಗುತ್ತಾರೆ.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿಸಿದರೆ ಏನೂ ನಷ್ಟವಾಗುವದಿಲ್ಲ. ಬದಲಿಗೆ ಅದರಿಂದ ಲಾಭವೇ ಹೆಚ್ಚು ಎಂಬದನ್ನು ಮನಗಾಣಬೇಕಿದೆ. ಕನ್ನಡವನ್ನು ಚೆನ್ನಾಗಿ ಕಲಿತ ವಿದ್ಯಾರ್ಥಿ ಅಗತ್ಯಕ್ಕೆ ಬೇಕಾದಷ್ಟು ಇಂಗ್ಲೀಷನ್ನೂ ಕಲಿತಿರುತ್ತಾನೆ ಎಂದು ಅಭಿಪ್ರಾಯಪಟ್ಟರು.

ಭಾಷೆ ಸಂವಹನದ ಒಂದು ಮಾಧ್ಯಮ ಮಾತ್ರ. ಯಾವ ಭಾಷೆಯೂ ಇನ್ನೊಂದು ಭಾಷೆಗಿಂತ ‘ಗ್ರೇಟ್’ ಅಲ್ಲ. ಆದರೆ, ನಮ್ಮ ಆಡುನುಡಿಯ ಬಗ್ಗೆ ಪ್ರೀತಿ, ಅಭಿಮಾನ, ಆ ಭಾಷೆ ಬೆಳೆಯಬೇಕೆಂಬ ಅಪೇಕ್ಷೆ ಇರುವದು ಅಪರಾಧವಲ್ಲ. ಅಂತಹ ಭಾವನೆಗಳು ಇರಬೇಕಾದರೂ ಇತರ ಭಾಷೆಗಳ ಬಗೆಗೆ ತಾತ್ಸಾರ ತೋರಬೇಕಾಗಿಲ್ಲ.

ಸಾಹಿತ್ಯ ಕ್ಷೇತ್ರ ಕೂಡ ಹಲವಾರು ಮಜಲುಗಳನ್ನು ಕಂಡಿದೆ. ಸಾಹಿತ್ಯಕ್ಕೆ ಓದುಗರ ಮನಸ್ಸನ್ನು ಪರಿವರ್ತಿಸುವ ಶಕ್ತಿ ಪೂರ್ತಿಯಾಗಿ ಅಲ್ಲದಿದ್ದರೂ ಭಾಗಶಃ ಇದೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಬದುಕಿನ ಸತ್ಯವನ್ನು ಮನಗಾಣಿಸಬಲ್ಲಂತಹ, ಮಾನವೀಯ ಮೌಲ್ಯಗಳನ್ನು ಗುರುತಿಸಿ ಅವುಗಳನ್ನು ಸಮಾಜದಲ್ಲಿ ನೆಲೆಗೊಳಿಸುವ ಪ್ರಯತ್ನ ಮಾಡುವಂತಹ, ಮನಸ್ಸನ್ನು ಹೆಚ್ಚು ಸೂಕ್ಷ್ಮವಾಗಿ ಸಂವೇದನಾತ್ಮಕವಾಗಿ ತೆರೆದಿಡುವಂತಹ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ, ವಿಶ್ವಾಸ, ನಂಬಿಕೆಗಳ ಮೂಲಕ ಮನುಷ್ಯನ ಬದುಕಿಗೆ ಪೂರಕವಾಗಿ ಪ್ರೇರಣೆಯಾಗಬಲ್ಲಂತಹ ಸಾಹಿತ್ಯ ಇಂದು ಬಹಳ ಅಗತ್ಯ.

ಭಾಷೆ, ಜನ್ಮಭೂಮಿಯ ಕುರಿತಾದ ಉನ್ಮಾದದ ಭಾವನೆಗಳಿಗಿಂತ ಅವುಗಳ ಉಳಿವು ಹಾಗೂ ಆ ಮೂಲಕ ಆಯಾ ಪ್ರದೇಶದ ಜನರ ಬದುಕನ್ನು ಸಾರ್ಥಕಗೊಳಿಸುವ ಚಟುವಟಿಕೆಗಳಿಗೆ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ತೆರೆದುಕೊಂಡರೆ ಈ ನೆಲದಲ್ಲಿ ಜನರ ಹಿತವನ್ನು ಬಯಸುವ ಸಾಹಿತ್ಯ ಇನ್ನಷ್ಟು ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಷಂಶುದ್ದೀನ್ ಅನಿಸಿಕೆ ವ್ಯಕ್ತಪಡಿಸಿದರು.