ಕುಶಾಲನಗರ, ಜೂ. 17: ಮದ್ಯದಂಗಡಿಗಳ ಅಸ್ತಿತ್ವ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಹೆದ್ದಾರಿ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ರಸ್ತೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆದ್ದಾರಿ ರಸ್ತೆಗಳನ್ನು ಡಿ ನೋಟಿಫಿಕೇಷನ್ ಮಾಡುವ ಕಾಯಕ ಈಗಾಗಲೇ ಪ್ರಾರಂಭಿಸಿದೆ. ಹೆದ್ದಾರಿ ರಸ್ತೆಯಿಂದ 500 ಮೀ ಅಥವಾ 220 ಮೀ ಅಂತರದಲ್ಲಿ ಮದ್ಯದಂಗಡಿಗಳನ್ನು ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನೆÀ್ನಲೆ ರಾಜ್ಯ ಸರ್ಕಾರ ಕೆಲವು ಮಾರ್ಪಾಡು ಆದೇಶಗಳನ್ನು ಹೊರಡಿಸಿದೆ. ಇದೇ ರೀತಿ ಕೊಡಗು ಜಿಲ್ಲೆಯಲ್ಲಿ 3 ರಾಜ್ಯ ಹೆದ್ದಾರಿಗಳನ್ನು ಪಟ್ಟಣ ಪಂಚಾಯ್ತಿಗೆ ಒಳಪಟ್ಟಂತೆ ಬದಲಾವಣೆಗೆ ಆದೇಶ ಹೊರಡಿಸಲಾಗಿದೆ.

ಹುಣಸೂರು-ತಲಕಾವೇರಿ ರಾಜ್ಯ ಹೆದ್ದಾರಿ ಸಂಖ್ಯೆ 90 ರ 21.74 ಕಿಮೀ ಯಿಂದ 117.5 ಕಿಮೀ ದೂರದ ರಸ್ತೆಯ 1.94 ಕಿಮೀ ರಸ್ತೆಯನ್ನು ವೀರಾಜಪೇಟೆ ಪಟ್ಟಣ ಪಂಚಾಯ್ತಿಗೆ ವರ್ಗಾಯಿಸಿದೆ. ಕೊಣನೂರು-ಮಾಕುಟ್ಟ ರಸ್ತೆಯ ರಾಜ್ಯ ಹೆದ್ದಾರಿ 91 ರ 2 ಕಿಮೀ ಉದ್ದದ ರಸ್ತೆ ಕುಶಾಲನಗರ ಟೌನ್ ಪಂಚಾಯ್ತಿಗೆ ಹಸ್ತಾಂತರಗೊಳ್ಳಲಿದೆ.

ಕೂಡಿಗೆ-ಕುಶಾಲನಗರ ರಸ್ತೆಯ ಗುಮ್ಮನಕೊಲ್ಲಿಯಿಂದ ಮಾರುಕಟ್ಟೆ ಮೂಲಕ ಹಾದುಹೋಗುವ ಪೆಟ್ರೋಲ್ ಬಂಕ್ ತನಕದ 2 ಕಿಮೀ ರಸ್ತೆ ರಾಜ್ಯ ಹೆದ್ದಾರಿ ಬದಲಾಗಿ ಸ್ಥಳೀಯ ಸಂಸ್ಥೆ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ 4 ಮದ್ಯದಂಗಡಿಗಳು

(ಮೊದಲ ಪುಟದಿಂದ) ಕಾರ್ಯನಿರ್ವಹಿಸುತ್ತಿದ್ದು, ಆದೇಶದ ಸೂಚನೆ ಹೊರಡುತ್ತಲೇ ಮದ್ಯದಂಗಡಿ ಯ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ಪ್ರಾರಂಭಗೊಂಡಿದೆ.

ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಮದ್ಯದಂಗಡಿಗಳು ತೆರೆಯುವ ಮುನ್ಸೂಚನೆ ಇದೆ. ಇನ್ನೊಂದೆಡೆ ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ 27 ರ 1.5 ಕಿಮೀ ರಾಜ್ಯ ಹೆದ್ದಾರಿಯನ್ನು ವೀರಾಜಪೇಟೆ ಪಟ್ಟಣ ಪಂಚಾಯ್ತಿ, 3.3 ಕಿಮೀ ರಸ್ತೆಯನ್ನು ಮಡಿಕೇರಿ ನಗರಸಭೆಗೆ, 2.6 ಕಿಮೀ ರಸ್ತೆ ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿಕೊಳ್ಳಲಿದೆ.

ಈ ಹೆದ್ದಾರಿಯ 106.25 ಕಿಮೀ ಉದ್ದದ ರಸ್ತೆಯಲ್ಲಿ 0 ಯಿಂದ 1.5 ರ ತನಕ ವೀರಾಜಪೇಟೆ, 31 ಕಿಮೀ ಯಿಂದ 34.3 ಕಿಮೀ ತನಕ ಮಡಿಕೇರಿ, 70.2 ರಿಂದ 72.80 ಕಿಮೀ ದೂರದ 2.6 ಕಿಮೀ ಸೋಮವಾರಪೇಟೆ ಪಂಚಾಯ್ತಿ ರಸ್ತೆಯಾಗಿ ಪರಿವರ್ತನೆ ಗೊಳ್ಳಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಸರಕಾರದ ಈ ದಿಢೀರ್ ನಿರ್ಧಾರ ದಿಂದ ಕುಶಾಲನಗರ ವ್ಯಾಪ್ತಿಯ ಮಾರುಕಟ್ಟೆ ರಸ್ತೆ ನಿವಾಸಿಗಳು ಮುಂದಿನ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಇದರಿಂದ ಈ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮದ್ಯದಂಗಡಿಗಳು ತೆರೆದುಕೊಳ್ಳುವ ಸಾಧ್ಯತೆ ಬಗ್ಗೆ ಚಿಂತೆಗೊಳಗಾಗಿರುವದು ಕಂಡುಬಂದಿದೆ. ಈಗಾಗಲೇ ಮಾರುಕಟ್ಟೆ ವ್ಯಾಪ್ತಿಯಲ್ಲಿ 2 ಮದ್ಯದಂಗಡಿಗಳು ಇದ್ದು, ಸರಕಾರದ ನಿರ್ಧಾರದಿಂದ ಮದ್ಯವ್ಯಾಪಾರಿಗಳು ಮತ್ತು ಕುಡುಕರಿಗೆ ಹೊಸ ಹುರುಪು ಬಂದಂತಾಗಿದೆ.

-ಸಿಂಚು.