ಆಲೂರುಸಿದ್ದಾಪುರ/ಕೊಡ್ಲಿಪೇಟೆ, ಜೂ.20: ಜನರಿಗೆ ಮಾದರಿಯಾಗಬೇಕಿದ್ದ ಅಂಚೆ ಇಲಾಖೆಯ ನೌಕರರು ಕರ್ತವ್ಯದ ಸಂದರ್ಭದಲ್ಲಿ ಅಂಚೆ ಕಚೇರಿಯನ್ನು ಬಾರ್ ಮಾಡಿಕೊಂಡು ಮದ್ಯ ಸೇವಿಸುತ್ತಿದ್ದ ಘಟನೆ ಸಮೀಪದ ಕೊಡ್ಲಿಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಡ್ಲಿಪೇಟೆಯಲ್ಲಿರುವ ಮುಖ್ಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಸೇರಿದಂತೆ ಒಟ್ಟು 4 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೇ 31 ರಂದು ಕೊಡ್ಲಿಪೇಟೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಅಂಚೆ ಪೇದೆಯೊಬ್ಬರು ಬೇರೆ ಕಡೆಗೆ ವರ್ಗಾವಣೆಗೊಂಡಿದ್ದರು. ವರ್ಗಾವಣೆಗೊಂಡಿದ್ದ ಹಿನ್ನೆಲೆಯಲ್ಲಿ ಅಂದು ಅವರಿಗೆ ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಸಮಾರಂಭದಲ್ಲಿ ಅಕ್ಕಪಕ್ಕದ ಗ್ರಾಮದ ಅಂಚೆ ಕಚೇರಿಯಿಂದ ಬಂದ ಸುಮಾರು 8 ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು. ಅರ್ಧ ಗಂಟೆ ಅವಧಿಯಲ್ಲಿ ಬೀಳ್ಕೊಡುವ ಸಮಾರಂಭ ಮುಗಿಯಿತು. ಆದರೆ ಕೊಡ್ಲಿಪೇಟೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಒಬ್ಬರನ್ನು ಹೊರತುಪಡಿಸಿದಂತೆ ಉಳಿದ ಸಿಬ್ಬಂದಿ ಅಂಚೆ ಕಚೇರಿಯನ್ನೇ ಮದ್ಯ ಸೇವಿಸುವ ಬಾರ್ ಮಾಡಿಕೊಂಡರು.

ಅಂಚೆ ಕಚೇರಿಯಲ್ಲಿ ನಡೆದ ಎಣ್ಣೆ ಪಾರ್ಟಿಯಲ್ಲಿ ವರ್ಗಾವಣೆಗೊಂಡ ಸಿಬ್ಬಂದಿ ಸೇರಿದಂತೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ಪೇದೆಗಳು, ನಿವೃತ್ತ ಅಂಚೆ ಇಲಾಖೆ ನೌಕರರು ಪಾಲ್ಗೊಂಡಿದ್ದರು. ಇದು ಹೇಗೋ ಸಾರ್ವಜನಿಕರಿಗೆ ತಿಳಿದು ಯಾರೋ ಒಬ್ಬರು ಅಂಚೆ ಕಚೇರಿಯಲ್ಲಿ ಮದ್ಯ ಸೇವಿಸುತ್ತಿದ್ದ ಚಿತ್ರವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ವಾಟ್ಸ್‍ಪ್‍ಗಳಿಗೆ ವೈರಲ್ ಮಾಡಿದ್ದಾರೆ. ಈ ಸಂಬಂಧ ಕೊಡ್ಲಿಪೇಟೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರಾದ ಶೋಭಿತ್ ಮತ್ತು ಇಂದ್ರೇಶ್ ಅವರುಗಳು ಸೋಮವಾರಪೇಟೆ ಮುಖ್ಯ ಅಂಚೆ ಕಚೇರಿಯ ಅಧಿಕಾರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ಅಂಚೆ ಇಲಾಖೆಯಿಂದ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕೊಡ್ಲಿಪೇಟೆ ಅಂಚೆ ಕಚೇರಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಅಲ್ಲಿನ ಸಾರ್ವಜನಿಕರಿಂದಾಗಲಿ, ಸಂಘ-ಸಂಸ್ಥೆಗಳ ಕಾರ್ಯಕರ್ತರಿಂದಾಗಲಿ ಲಿಖಿತ ಮತ್ತು ಮೌಖಿಕ ದೂರು ಬಂದಿಲ್ಲ, ಆದರೂ ಈ ಸಂಬಂಧ ತನಿಖೆ ನಡೆಸಲು ಸೋಮವಾರಪೇಟೆ ಮುಖ್ಯ ಅಂಚೆ ಕಚೇರಿಯ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ತನಿಖೆಯ ವರದಿ ಬಂದ ನಂತರವಷ್ಟೇ ಈ ಕುರಿತು ಕ್ರಮಕೈಗೊಳ್ಳಲಾಗುವದು ಎಂದು ಸೋಮವಾರಪೇಟೆ ಅಂಚೆ ಉಪ ನಿರೀಕ್ಷಕ ಷಣ್ಮುಗ ತಿಳಿಸಿದ್ದಾರೆ.-ನರೇಶ್, ದಿನೇಶ್ ಮಾಲಂಬಿ