ಒಡೆಯನಪುರ, ಜೂ. 19: ಸರಕಾರದ ವತಿಯಿಂದ ಅಭಿವೃದ್ಧಿ ಕಾಮಗಾರಿ ಕಾರ್ಯ ನಡೆಯುವ ಸಂದರ್ಭದಲ್ಲಿ ಮರಗಿಡ ಮತ್ತು ಪರಿಸರ ಸಂಪತ್ತುನ್ನು ನಾಶ ಮಾಡಲಾಗುತ್ತಿದೆ ಎಂದು ದುಂಡಳ್ಳಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಶಿವಲಿಂಗಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಅರಣ್ಯ ಇಲಾಖೆ, ತಾಲೂಕು ಪತ್ರಕರ್ತರ ಸಂಘ ಹಾಗೂ ಸೋಮವಾರಪೇಟೆ ರೋಟರಿ ಸಂಸ್ಥೆ ಸಂಯುಕ್ತ ಆಶ್ರಯ ದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರ ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ, ವಿವಿಧ ಕಟ್ಟಡ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡಲು ಪರೋಕ್ಷವಾಗಿ ಕಾರಣವಾಗಿದೆ ಎಂದರು. ಅರಣ್ಯ ಪರಿಸರ ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯವಾಗಿದೆ, ಆದರೆ ಇಂದು ಅದೇ ಮನುಷ್ಯನ ಹಣದ ದುರಾಸೆಗೆ ಮರಗಿಡ ಹಗೂ ಪರಿಸರ ಬಲಿಯಾಗುತ್ತಿದೆ, ಸರಕಾರ ಮತ್ತು ಜನರಾಗಲಿ ಅಗತ್ಯ ಕಂಡು ಬಂದಾಗ ಮರವೊಂದನ್ನು ಕಡಿಯುವ ಸಂದರ್ಭ ಬಂದಾಗ ಪಕ್ಕದಲ್ಲಿ ಹತ್ತು ಸಸಿಗಳನ್ನು ನೆಡುವ ಕಾರ್ಯವನ್ನು ಮಾಡಬೇಕು. ಇದರಿಂದ ಪರಿಸರ ಅಭಿವೃದ್ಧಿಯಾಗುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಡಿನಲ್ಲಿ ವಾಸ ಮಾಡುವ ಆನೆ ಮುಂತಾದ ಕಾಡುಪ್ರಾಣಿಗಳು ನಾಡಿಗೆ ಬರಲು ಪರಿಸರ ನಾಶವೇ ಕಾರಣವಾಗಿದೆ. ಅರಣ್ಯ ಬರಿದಾಗುತ್ತಿರುವದ್ದರಿಂದ ವನ್ಯಜೀವಿಗಳಿಗೆ ಆಹಾರ ಸಿಗುತ್ತಿಲ್ಲ ಎಂದರು. ಸೋಮವಾರಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರಮೇಶ್ ಮಾತನಾಡಿ, ಧರ್ವಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪರಿಸರ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅರಣ್ಯ ಮತ್ತು ಪರಿಸರವನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಜೊತೆಗೂಡಿ ಗಿಡ ನೆಡುವ ಕಾರ್ಯ ವನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ವಿ.ಎಂ. ರಮೇಶ್ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ತಾರಮಣಿ, ಶನಿವಾರಸಂತೆ ಪತ್ರಕರ್ತ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್, ಪ್ರಮುಖರಾದ ಜಿ.ಎಂ. ಕಾಂತರಾಜು, ಎಸ್.ಸಿ. ಶರತ್‍ಶೇಖರ್, ಡಿ.ಬಿ. ಸೋಮಪ್ಪ, ಹೆಚ್.ಎಸ್. ಪ್ರೇಮ್‍ನಾಥ್, ಶಿವಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಸಂಪನ್ಮೂಲ ವ್ಯಕ್ತಿ ಪ್ರಮೀಳ, ಸೇವಾ ಪ್ರತಿನಿಧಿಗಳಾದ ಮಹೇಶ್, ಶಾಲಾ ಮುಖ್ಯ ಶಿಕ್ಷಕ ಅಪ್ಪಸ್ವಾಮಿ ಮುಂತಾದವರಿದ್ದರು.