ಶ್ರೀಮಂಗಲ, ಜೂ. 19 : ಶ್ರೀಮಂಗಲ ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗೆ ಕಚೇರಿ ನಿರ್ಮಿಸಲು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಸರ್ವೆಯಾಗಿ ಜಾಗ ಮಂಜೂರಾತಿ ಹಂತದಲ್ಲಿ ಕಡತವನ್ನು ಶ್ರೀಮಂಗಲ ಉಪತಹಶೀಲ್ದಾರರ ಕಚೇರಿಯಲ್ಲಿ 7 ತಿಂಗಳಿನಿಂದ ವಿಲೇವಾರಿ ಮಾಡದೆ ಮರೆಮಾಚಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮ ಲೆಕ್ಕಾಧಿಕಾರಿ ರಿಯಾಜ್ ಅವರಿಗೆ ನೊಟೀಸ್ ಜಾರಿಗೊಳಿಸುವದಾಗಿ ಕಂದಾಯ ಪರಿವೀಕ್ಷಕ ಶಿವಪ್ಪ ತಿಳಿಸಿದ್ದಾರೆ.

ಕಡತ ವಿಲೇವಾರಿ ಬಗ್ಗೆ ವಿಚಾರಿಸಿದಾಗಲೂ ಯಾವದೇ ಮಾಹಿತಿ ನೀಡದೆ ತಹಶೀಲ್ದಾರರ ಕಚೇರಿ, ಸರ್ವೆ ಕಚೇರಿ ಮತ್ತು ಶ್ರೀಮಂಗಲ ಉಪತಹಶೀಲ್ದಾರರ ಕಚೇರಿಗೆ ಕಳೆದ 7 ತಿಂಗಳಿನಿಂದ ಅಲೆದಾಡುವಂತೆ ಮಾಡಿರುವ ಕಂದಾಯ ಇಲಾಖೆಯ ಅಧಿಕಾರಿಗಳ ಉದ್ದಟತನದ ಬಗ್ಗೆ ಶ್ರೀಮಂಗಲ ಕಂದಾಯ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು, ಈ ಹಿಂದೆ ಅಧ್ಯಕ್ಷರಾಗಿದ್ದ ಕಟ್ಟಿಮಂದಯ್ಯ ಅವರ ಅವಧಿಯಲ್ಲಿ ಚೇಂಬರ್ ಆಫ್ ಕಾಮರ್ಸ್‍ಗೆ ಕಚೇರಿ ನಿರ್ಮಿಸಲು ನಿವೇಶನ ಗುರುತಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಕಂದಾಯ ಇಲಾಖೆ ನಾಪತ್ತೆ ಮಾಡಿದೆ. ಮತ್ತೆ ತನ್ನ ಅವಧಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಕಡತ ಮಂಜೂರಾತಿ ಹಂತದಲ್ಲಿರುವಾಗ ಕಡತವನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಈ ಬಗ್ಗೆ ವಿಚಾರಿಸಿದರೆ ಕಡತ ಹೊಂದಿರುವವರು ಕಚೇರಿಗೆ ಬಂದು ವಿಚಾರಿಸಿದ ಕಾರಣ ವಿಲೇವಾರಿ ಮಾಡದೆ ಇಟ್ಟುಕೊಳ್ಳಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ರಿಯಾಜ್ ಹೇಳಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಮುತ್ತಪ್ಪ ಅವರು, ನಿಯಮ ಪ್ರಕಾರ ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡಬೇಕು. ಸಂಬಂಧಿಸಿದ ಕಡತಕ್ಕೆ ಹೆಚ್ಚುವರಿ ದಾಖಲಾತಿ ಬೇಕಿದ್ದರೆ ಅಥವಾ ಏನಾದರೂ ಲೋಪವಿದ್ದರೆ ಸಂಬಧಿಸಿದ ಅರ್ಜಿದಾರರಿಗೆ ತಿಳಿಸುವದು ಕಂದಾಯ ಅಧಕಾರಿಗಳ ಜವಾಬ್ದಾರಿಯಾಗಿದೆ. ಅದು ಬಿಟ್ಟು ಕಡತ ವಿಲೇವಾರಿಯಾಗಲು ಖುದ್ದಾಗಿ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ಕಾಣಬೇಕು ಎಂದರೆ ಇದರ ಅರ್ಥ ಏನು. ಅಧಿಕಾರಿಗಳು ಏನಾದರೂ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಅದ್ಯಕ್ಷ ಕಟ್ಟಿಮಂದಯ್ಯ ಮಾತನಾಡಿ, ಕಡತ ವಿಲೇವಾರಿ ಮಾಡದೆ 7 ತಿಂಗಳಿನಿಂದ ಇಲ್ಲಿಯೇ ಇಟ್ಟು ಕೊಂಡಿರುವದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬೆಳೆಗಾರರ ಒಕ್ಕೂಟದ ಗೌರವ ಅಧ್ಯಕ್ಷ ಶಂಕರು ನಾಚಪ್ಪ ಮಾತನಾಡಿ, ಪ್ರತಿವಾರ ಕಚೇರಿಗೆ ಬರುವ ಕಡತಗಳು, ವಿಲೇವಾರಿಯಾಗಿರುವ ಕಡತಗಳು, ಕಚೇರಿಯಲ್ಲಿಯೇ ಉಳಿದುಕೊಂಡಿರುವ ಕಡತಗಳು ಇದಕ್ಕೆ ಸಕಾರಣದ ಬಗ್ಗೆ ಕಂದಾಯ ಪರಿವೀಕ್ಷಕರು ಪರಿಶೀಲಿಸಿ ದಾಖಲಿಸಿಕೊಳ್ಳುವ ವ್ಯವಸ್ಥೆ ಆಗಬೇಕು ಎಂದು ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಬೊಳ್ಳಜಿರ ಅಶೋಕ, ಶ್ರೀಮಂಗಲ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ದಾದಾ ದೇವಯ್ಯ, ಪ್ರಮುಖರಾದ ಬಾಚಂಗಡ ಪೂವಯ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು.