ಶ್ರೀಮಂಗಲ, ಜೂ.20 : ಕೊಡಗು ಜಿಲ್ಲೆಯಲ್ಲಿ ಸುಮಾರು 50 ಸಾವಿರ ಕೆರೆ ಹಾಗೂ 35 ಲಕ್ಷದಷ್ಟು ಪ್ರಮಾಣದ ವೃಕ್ಷರಾಶಿಯನ್ನು ಕಾಫಿ ಬೆಳೆಗಾರರು ಹೊಂದಿರುವದರಿಂದ ಪರಿಸರ ಸ್ನೇಹಿಯಾದ ಕಾಫಿ ಬೆಳೆಯಿಂದ ಪರಿಸರದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ತಮ್ಮ ಉಳಿವಿಗಾಗಿ ಸರಕಾರದಿಂದ ಸೌಲಭ್ಯ ಪಡೆಯಲು ತಮ್ಮ ಹಕ್ಕೊತ್ತಾಯ ಮಾಡಲು ಅರ್ಹರಾಗಿದ್ದಾರೆ. ಸರಕಾರ ಕಾಫಿ ಬೆಳೆಗಾರರ ಅಭಿವೃದ್ದಿಗೆ ಪೂರಕವಾಗಿ ಸ್ಪಂದನ ನೀಡಬೇಕಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಸರಕಾರದ ಮೇಲೆ ಒತ್ತಡವನ್ನು ಹಾಕಬೇಕಾಗಿದೆ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಕೊಡಗು ಕಾಫಿ ಬೆಳೆಗಾರರ ಒಕ್ಕೂಟದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಕಾಫಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಕಾಫಿ ಬೆಳೆಗೆ ಉತ್ತಮ ಭವಿಷ್ಯವಿದೆ. ಕಳೆದ ಸಾಲಿನಲ್ಲಿ ಕಾಫಿ ಮಂಡಳಿಯಿಂದ ಮೊಟ್ಟ ಮೊದಲ ಬಾರಿಗೆ 140 ಕೋಟಿ ಅನುದಾನ ಬಿಡುಗಡೆಮಾಡಲಾಗಿದ್ದು, ಇದರಿಂದ 120 ಸಾವಿರ ಬೆಳೆಗಾರರಿಗೆ ಅನುಕೂಲವಾಗಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ 940 ಕೋಟಿ ವಿಶೇಷ ಅನುದಾನವನ್ನು ನೀಡಲಾಗಿದೆ. ದೇಶದ ಆರ್ಥಿಕತೆಯಲ್ಲಿ ಕಾಫಿ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ ಕಾಫಿ ಬೆಳೆಗಾರರು ಉತ್ತಮ ಧಾರಣೆಯಿಲ್ಲದೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಿರುವ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಮತ್ತಷ್ಟು ಒತ್ತಡವನ್ನು ನೂತನ ಸಮಿತಿಯವರು ಹಾಕುವದರ ಮೂಲಕ ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮಾತನಾಡಿ, ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಕೃಷಿ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಚಿಂತಿಸುತ್ತಿದ್ದು, ಕಾಫಿ ಬೆಳೆಗಾರರ ಮೇಲೆಯೂ ಇದರ ದುಷ್ಪರಿಣಾಮ ಉಂಟಾಗಲಿದೆ. ಕಾಫಿ ಮಂಡಳಿಯ ಆದೇಶದ ಅನ್ವಯ 50 ಏಕರೆಗಿಂತ ಕಡಿಮೆ ಇರುವವರನ್ನು ಸಣ್ಣ ಬೆಳೆಗಾರರು ಮತ್ತು ಇದಕ್ಕಿಂತ ಮೇಲ್ಪಟ್ಟವರನ್ನು ದೊಡ್ಡ ಬೆಳೆಗಾರರೆಂದು ನಿರ್ದೇಶನ ನೀಡಿದೆ. ಆದರೆ ದೇಶದಲ್ಲಿ ಶೇ. 98.08 ಸಣ್ಣ ಬೆಳೆಗಾರರು ಮತ್ತು ಶೇ. 1.02 ದೊಡ್ಡ ಬೆಳೆಗಾರರು ಇದ್ದು, ಸರಕಾರ ಸಣ್ಣ ಬೆಳೆಗಾರರನ್ನು ಪರಿಗಣನೆ ಮಾಡದೆ, ದೊಡ್ಡ ಬೆಳೆಗಾರರ ಸ್ಥಿತಿಯಲ್ಲಿಯೇ ಸಣ್ಣ ಬೆಳೆಗಾರರೂ ಇದ್ದಾರೆ ಎನ್ನುವ ತಪ್ಪು ಮಾಹಿತಿಯಿಂದ ಏಕಾಏಕಿ ಕೃಷಿ ಆದಾಯ ತೆರಿಗೆಯನ್ನು ಹೇರಬಾರದು. ಒಂದು ವೇಳೆ ಈ ತೆರಿಗೆಯನ್ನು ಕಾಫಿ ಬೆಳೆಗಾರರ ಮೇಲೆ ಏರಿದರೆ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ಉಂಟಾಗಲಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಬೆಳೆಗಾರರ ಒಕ್ಕೂಟದಲ್ಲಿ ಯಾವದೇ ರಾಜಕೀಯ ಸೋಂಕು ಇಲ್ಲದೆ, ಬೆಳೆಗಾರರ ಹಿತಸಂರಕ್ಷಣೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದೆ. ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವವರು ಬೆಳೆಗಾರರ ಒಕ್ಕೂಟದಲ್ಲಿ ಪ್ರಮುಖ ಸ್ಥಾನ ಪಡೆದರೆ ಆ ಪಕ್ಷದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳುವ ಮೂಲಕ, ಬೆಳೆಗಾರರ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ ಅವಧಿಯ ಸಮಿತಿ ರಾಜಕೀಯ ರಹಿತವಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಸಲಹೆ ನೀಡಿದರು.

ಕಳೆದ ಆರು ವರ್ಷಗಳಿಂದ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ಆರೋಗ್ಯ ಸಮಸ್ಯೆಯಿಂದ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ ಶಂಕರು ನಾಚಪ್ಪ ಅವರ ಸೇವೆಯನ್ನು ಗೌರವಿಸಿ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಸದಸ್ಯೆ ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಮಂಡಿಸಿದರು. ಲೆಕ್ಕಪತ್ರವನ್ನು ಖಜಾಂಜಿ ಮಾಣೀರ ವಿಜಯ್ ನಂಜಪ್ಪ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಚೆಪ್ಪುಡಿರ ರಾಧ ಅಚ್ಚಯ್ಯ, ಜಿಲ್ಲಾ ಘಟಕದ ಪ್ರತಿನಿಧಿ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಜಂಟಿ ಕಾರ್ಯದರ್ಶಿ ಪೊರ್ಕೋಂಡ ಬೋಪಣ್ಣ ಹಾಜರಿದ್ದರು.