ಮಡಿಕೇರಿ, ಜೂ. 18: ಕೇಂದ್ರ ಸರ್ಕಾರದ ಮಹತ್ವಪೂರ್ಣ ಆರೋಗ್ಯ ಸೇವೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಜನೌಷಧ ಅರಿವು ಕಾರ್ಯಕ್ರಮ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಿತು.

ಪ್ರಧಾನಮಂತ್ರಿ ಜನೌಷಧ ದಿಂದಾಗಿ ದೇಶದಲ್ಲಿ ಶೇ.80ರಿಂದ 90ರಷ್ಟಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲ ವಾಗಿದೆ. ತುಂಬಾ ಕಡಿಮೆ ಹಣಕ್ಕೆ ಸಿಗುವ ಜನೌಷಧದಿಂದಾಗಿ ಆರೋಗ್ಯ ಸೇವೆ ಎಲ್ಲರಿಗೂ ಸಿಗುವದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಜನೌಷಧದ ಸಾಧಕಗಳ ಬಗ್ಗೆ ಬ್ಯೂರೋ ಆಫ್ ಫಾರ್ಮ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ ಆಫ್ ಇಂಡಿಯಾದ ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಡಾ. ಅನಿಲ ದೀಪಕ್ ಶೆಟ್ಟಿ ಮಾತನಾಡಿ, ‘ಜನೌಷಧ; ಔಷಧಿ ಯೋಜನೆ ಆರೋಗ್ಯ ಕ್ಷೇತ್ರದಲ್ಲಾದ ದೊಡ್ಡಕ್ರಾಂತಿಯಾಗಿದೆ. ಇದರಿಂದ ದೇಶದಲ್ಲಿ ಶೇ.70ರಿಂದ 80ರಷ್ಟು ಕಡಿಮೆ ದರದಲ್ಲಿ ಜನತೆಗೆ ಆರೋಗ್ಯ ಸಿಗಲಿದೆ. ಈ ಯೋಜನೆಯಲ್ಲಿ ಸುಮಾರು 1500 ಔಷಧಿಗಳು ಸಿಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದೀಗ 750 ಔಷಧಿಗಳು ಸಿಗುತ್ತಿದೆ. ದೇಶದ ಶೇ. 90ರಷ್ಟು ಜನರಿಗೆ ಜನೌಷಧ ಯೋಜನೆಯಿಂದ ಒಳ್ಳೆಯದಾದರೆ ಶೇ.10ರಷ್ಟು ಮಂದಿಗೆ ತೊಂದರೆಯಾಗುವದು ಸಹಜ. ಆರೋಗ್ಯ ಸಮಸ್ಯೆ ನಮ್ಮ ದೇಶದ ಸಂಸ್ಕøತಿ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈಗ ದೇಶದ ಪರಿಸ್ಥಿತಿ ಬದಲಾಗುತ್ತಿದ್ದು, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡುವ ಇಚ್ಛೆ ಕೇಂದ್ರ ಸರ್ಕಾರ ದೊಂದಿಗೆ ಜನಸಾಮಾನ್ಯರಿಗೂ ಇದೆ. ಕೊಡಗು ಜಿಲ್ಲೆಯಲ್ಲಿ 10ರಿಂದ 15 ಜನೌಷಧ ಕೇಂದ್ರಗಳು ಆರಂಭವಾಗಲಿದೆ ಎಂದು ಹೇಳಿದರು.

ಜನೌಷಧದ ಬಾಧಕಗಳ ಬಗ್ಗೆ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕಾನೂನು ಸಲಹಾ ಸಮಿತಿ ಸದಸ್ಯ ಕೆ. ಹರೀಶ್ ಮಾತನಾಡಿ, ಔಷಧಿಗಳ ಮೌಲ್ಯವನ್ನು ನಿರ್ಧಾರ ಮಾಡುವದು ಔಷಧಿ ವ್ಯಾಪಾರಿಗಳಲ್ಲ. ಔಷಧಿ ವ್ಯಾಪಾರಿಗಳು ಶೇ. 16ರಷ್ಟು ಲಾಭಾಂಶದೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಜಿ.ಎಸ್.ಟಿ. ಯೋಜನೆ ಯಿಂದ ಔಷಧ ಮಳಿಗೆಯನ್ನು ಮುಚ್ಚುವ ಆತಂಕವಿದ್ದು, ಯೋಜನೆ ಯಿಂದ 26,000ಕ್ಕೂ ಅಧಿಕ ಔಷಧ ವ್ಯಾಪಾರಿಗಳು ತೊಂದರೆ ಅನುಭವಿ ಸಲಿದೆ. ಪ್ರಧಾನಿಗಳ ಜನೌಷಧ ಯೋಜನೆಗೆ ಔಷಧಿ ವ್ಯಾಪಾರಿಗಳ ವಿರೋಧವಿಲ್ಲ. ನಮ್ಮನ್ನು ಸೇರಿಸಿ ಕೊಂಡು ಜನೌಷಧ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ ಎಂದು ಮಾರ್ಮಿಕವಾಗಿ ನುಡಿದರು.

ಸಾಧಕ - ಬಾಧಕಗಳ ಬಗ್ಗೆ ವಿಶ್ಲೇಷಣೆ ಮಾಡಿ ಮಾತನಾಡಿದ ‘ಶಕ್ತಿ' ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು ದೇಶದಲ್ಲಿ ಬಡವನ ಅನಾರೋಗ್ಯ ಚಿಕಿತ್ಸೆಗೆ ಸಮಸ್ಯೆಯಿದೆ. ಆಸ್ಪತ್ರೆಗಳಲ್ಲಿ ಔಷಧಿಗೆ ಬೆಲೆ ಕಡಿಮೆ ಮಾಡಿದರೂ ಇತರ ಸೌಲಭ್ಯಗಳ ಬೆಲೆ ಅಧಿಕವಿದೆ. ಜನಸಾಮಾನ್ಯನ ಹಿತದ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಮಾನವ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ದೇಶದಲ್ಲಿ ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಲಿಗೆಗಳು ನಡೆಯುತ್ತಿವೆ. ಒಂದು ರೀತಿಯಲ್ಲಿ ಲೈಸೆನ್ಸ್ ದರೋಡೆ ಎಂಬಂತಾಗಿದೆ. ಔಷಧಿ ದಬ್ಬಾಳಿಕೆಯನ್ನು ಕಡಿಮೆ ಮಾಡಲು ಜನೌಷಧ ಯೋಜನೆ ಯಿಂದ ಶೇ.2ರಷ್ಟು ಸಾಧ್ಯವಾಗಿದೆ. ಶೇ.98ರಷ್ಟು ಸಮಸ್ಯೆ ಇನ್ನೂ ಬಾಕಿ ಇದೆ. ಈ ಯೋಜನೆಯನ್ನು ನಿಲ್ಲಿಸಬೇಕೆಂದು ಯಾರಾದರೂ ಯೋಚಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಬಾಧಕಗಳ ಬಗ್ಗೆ ಏನಾದರೂ ಚರ್ಚಿಸುವದಾದರೂ ರಾಷ್ಟ್ರಮಟ್ಟದಲ್ಲಿ ಅವಕಾಶವಿದೆ. ಜನೌಷಧ ಉತ್ತಮ ಯೋಜನೆ ಯಾಗಿದ್ದರೂ, ಫಾರ್ಮಸಿಸ್ಟ್‍ಗಳ ಮೂಲಕ ಔಷಧಿ

(ಮೊದಲ ಪುಟದಿಂದ) ವಿತರಣೆಯ ಸಾಧಕ - ಬಾಧಕಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಎಂ.ಜಿ. ಪಾಟ್ಕರ್ ದೇಶದಲ್ಲಿ ಶೇ.80ರಷ್ಟು ಜನತೆ ಕಡುಬಡವರಿದ್ದಾರೆ. ಹಣ ಮಾಡುವ ಮನೋಭಾವವನ್ನು ವೈದ್ಯರು ಬಿಡಬೇಕಾಗಿದೆ. ವೈದ್ಯರು ಅಧಿಕ ಹಣದ ಔಷಧಿ ಬರೆಯುವದು ಮತ್ತು ಚೂರಿ ಹಾಕುವದು ಒಂದೇ ಎಂದು ಮಾರ್ಮಿಕವಾಗಿ ನುಡಿದ ಅವರು, ಸಮಸ್ಯೆ ಪರಿಹಾರ ಸರ್ಕಾರದಿಂದ ಮಾತ್ರ ಸಾಧ್ಯ. ಬಡವರಿಗೆ ಮತ್ತು ಹಿರಿಯ ನಾಗರಿಕರಿಗೆ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯ ಅವಶ್ಯಕವಾಗಿದೆ. ಸರ್ಕಾರದ ವ್ಯವಸ್ಥೆ ಕಟ್ಟಕಡೆಯ ವ್ಯಕ್ತಿಗೂ ತಲಪಬೇಕಾಗಿದೆ. ಬದ್ಧತೆಯಿಂದ ಕೆಲಸ ಮಾಡಿದಾಗ ಜನಸಾಮಾನ್ಯರಿಗೆ ಯೋಜನೆಗಳು ತಲಪುತ್ತವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಹಿಂದೆ ದೇಶದಲ್ಲಿ ಸಾಂಪ್ರದಾಯಿಕ ಆರೋಗ್ಯ ಪದ್ಧತಿ ಇತ್ತು. ಮಾನವ ಸಂಪನ್ಮೂಲ ಅಭಿವೃದ್ಧಿಯಾಗಬೇಕಾದರೆ ಆರೋಗ್ಯ ಹಾಗೂ ಶಿಕ್ಷಣ ಅಗತ್ಯವಾಗಿ ಬೇಕಾಗಿದೆ. ಎಲ್ಲಾ ಕ್ಷೇತ್ರವೂ ಹಣ ಮಾಡುವ ದಂಧೆಯಾಗಿದೆ. ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದೆ ಎಂದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ. ಮನುಮುತ್ತಪ್ಪ ಮಾತನಾಡಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದಾಗಿ 600 ಮಂದಿ ನೇತ್ರದಾನಕ್ಕೆ ಮುಂದಾಗಿದ್ದಾರೆ. ಪ್ರಕೋಷ್ಠ ಸರ್ಕಾರದ ಯೋಜನೆಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ರಾಜಕಾರಣಿಗಳೇ ಶಿಕ್ಷಣ ಕೇಂದ್ರ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಡೆಸುತ್ತಿರುವದು ಇಂದು ಸಮಸ್ಯೆಯಾಗಿದೆ. ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸು ವದರೊಂದಿಗೆ ವಿಶ್ವದ ನಂ.1 ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಕನಸನ್ನು ನನಸು ಮಾಡಬೇಕಾಗಿದೆ ಎಂದರು.

ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಆದರೆ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲಪುತ್ತಿಲ್ಲ. ಜನತೆ ನಿತ್ಯ ಆರೋಗ್ಯಕ್ಕಾಗಿ ಅಧಿಕ ಹಣ ಖರ್ಚು ಮಾಡುತ್ತಿದ್ದಾರೆ. ಜನೌಷಧ ಶೇ.80ರಿಂದ 85ರಷ್ಟು ಕಡಿಮೆ ಖರ್ಚಿನಲ್ಲಿ ಜನತೆಗೆ ಸಿಗಲಿದೆ. ಸ್ವಾಸ್ಥ್ಯ ಸಮಾಜಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಅಗತ್ಯ. ಸ್ವಾಸ್ಥ್ಯ ಸಮಾಜಕ್ಕಾಗಿ ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ. ಇದನ್ನು ಜನತೆಗೆ ತಲಪಿಸಬೇಕಾಗಿದೆ ಎಂದರು. ಹಾಸನ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ಸಂತೋಷ್ ಜನೌಷಧ ಸಾಧಕಗಳ ಬಗ್ಗೆ ಹಲವು ಮಾಹಿತಿ ನೀಡಿದರು.

ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಜೈನಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ವಂದಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.