ಮಡಿಕೇರಿ, ಜೂ. 19: ಕೊಡಗಿನ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಗೆ ಸರಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರಿಸಿ ದ್ದಾರೆ.ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ರಾಜ್ಯದ ತರಬೇತುದಾರರಿಗೆ ಅವರ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಗುವದು. ಈ ಪ್ರಶಸ್ತಿಯು ರೂ. 1.50 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿ 33 ಕ್ರೀಡಾ ಶಾಲೆ, ವಸತಿ ನಿಲಯಗಳನ್ನು ನಿರ್ವಹಿಸುತ್ತಿದ್ದು, ಉಚಿತವಾಗಿ ಕ್ರೀಡಾ ತರಬೇತಿ, ಊಟೋಪಚಾರ, ವಸತಿ, ಕ್ರೀಡಾ ಕಿಟ್, ವಿಮಾ ಸೌಲಭ್ಯ ಒದಗಿಸುತ್ತಿದೆ. 2016-17ನೇ ಸಾಲಿನಲ್ಲಿ ಮಡಿಕೇರಿ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಜಿಲ್ಲೆಯ ಸಂತೆ ಮಾರನಹಳ್ಳಿ ಮತ್ತು ಕಲ್ಬುರ್ಗಿಗಳಲ್ಲಿ ಕ್ರೀಡಾ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಯಾದಗಿರಿಯಲ್ಲಿ 2017-18ನೇ ಸಾಲಿನಿಂದ ಜಿಲ್ಲಾ ಕ್ರೀಡಾ ಶಾಲೆ ಆರಂಭಿಸಲಾಗಿದೆ.

ಯುವಶಕ್ತಿ ಕೇಂದ್ರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಿ ಯುವಜನರ ದೈಹಿಕ ಆರೋಗ್ಯಕ್ಕೆ ಪೂರಕವಾಗಿ ಜಿಮ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಕ್ರೀಡಾ ಮೀಸಲಾತಿ

ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಗರಡಿ ಮನೆ ನಿರ್ಮಾಣ

ಗ್ರಾಮೀಣ ಕುಸ್ತಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಗರಡಿ ಮನೆ ನಿರ್ಮಾಣ ಮತ್ತು ನವೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ.

ವಿಶೇಷ ಘಟಕ ಉಪ ಯೋಜನೆ, ಗಿರಿಜನ ಉಪಯೋಜನೆ

ವಿಶೇಷ ಘಟಕ ಉಪಯೋಜನೆ, ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹ ಧನ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿದ್ಯಾರ್ಥಿ ನಿಲಯಗಳಿಗೆ ಕ್ರೀಡಾ ಸಾಮಗ್ರಿ ಸರಬರಾಜು, ಅರ್ಹ ಸಂಘ- ಸಂಸ್ಥೆಗಳಿಗೆ ಜಿಮ್ / ಕ್ರೀಡಾ ಸಾಮಗ್ರಿ ಖರೀದಿಗೆ ಅನುದಾನ ನೀಡಲಾಗುತ್ತಿದೆ.

ಕ್ರೀಡಾ ಶ್ರೇಷ್ಠತಾ ಕೇಂದ್ರ

ಕರ್ನಾಟಕದ ಕ್ರೀಡಾಪಟುಗಳಿಗೆ ಅಂತರ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು, ವಿದೇಶದಲ್ಲಿ ಕ್ರೀಡಾ ತರಬೇತಿ ಪಡೆಯಲು ಧನ ಸಹಾಯ, ಅಂತರ್ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ದೈಹಿಕ ಸಾಮಥ್ರ್ಯ ಹೆಚ್ಚಿಸಲು ಪೌಷ್ಠಿಕ ಆಹಾರದ ಜೊತೆಗೆ ಅಗತ್ಯ ಕ್ರೀಡಾ ಉಪಕರಣಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಜನರಿಗೆ ವೃತ್ತಿ ಕೌಶಲ್ಯ, ಸಾಹಸ ಕ್ರೀಡಾ ಪ್ರಶಿಕ್ಷಕರ ತರಬೇತಿ ಹಾಗೂ ಪೈಲೆಟ್ ತರಬೇತಿ ನೀಡಲಾಗುತ್ತಿದೆ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸ್ಥಾಪಿಸಿ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಗ್ರಾಮೀಣ ಕ್ರೀಡೋತ್ಸವ

ಗ್ರಾಮೀಣ, ದೇಶೀ ಕ್ರೀಡೆಗಳನ್ನು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಲು ಗ್ರಾಮೀಣ ಕ್ರೀಡೋತ್ಸವಗಳನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುವದು. ಪ್ರತಿ ತಾಲೂಕಿಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರೂ. 1.50 ಲಕ್ಷಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಯುವ ಕ್ರೀಡಾ ಮಿತ್ರ

ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತೇಜನ ನೀಡಲು ಯುವಜನ / ಕ್ರೀಡಾ ಸಂಘಗಳಿಗೆ ತಲಾ ರೂ. 25,000/- ಮೌಲ್ಯದ ಕ್ರೀಡಾ ಸಾಮಗ್ರಿ/ ಧನ ಸಹಾಯ ಒದಗಿಸುವದು.

ಮೂಲಭೂತ ಸೌಕರ್ಯ ಅಭಿವೃದ್ಧಿ

ರಾಜ್ಯದ ಯುವಜನರಿಗೆ ಮತ್ತು ಕ್ರೀಡಾಪಟುಗಳಿಗೆ ಅಗತ್ಯವಾದ ಜಾಗತಿಕ ಗುಣಮಟ್ಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‍ಗಳು ಹಾಕಿ ಟರ್ಫ್‍ಗಳು, ಈಜುಕೊಳಗಳು ಮತ್ತು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಗಳು, ಜಿಲ್ಲಾ ಕ್ರೀಡಾಂಗಣಗಳು ಮತ್ತು ತಾಲೂಕು ಕ್ರೀಡಾಂಗಣಗಳನ್ನು ನಿರ್ಮಿಸುವದು ಇದರ ಉದ್ದೇ&divlusmn; Àವಾಗಿದೆ.

ಕರ್ನಾಟಕ ಕ್ರೀಡಾ ಪ್ರಾಧಿಕಾರ

ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ರಾಜ್ಯ ಕ್ರೀಡಾ ಸಂಸ್ಥೆಗಳು ರಾಜ್ಯ, ದಕ್ಷಿಣ ವಲಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ರಾಜ್ಯದಲ್ಲಿ ನಡೆಸಲು ಹಾಗೂ ದಕ್ಷಿಣ ವಲಯ/ ರಾಷ್ಟ್ರೀಯ ಮಟ್ಟದ ವಿವಿಧ ಪಂದ್ಯಾವಳಿಗಳಲ್ಲಿ ರಾಜ್ಯ ತಂಡದ ಕ್ರೀಡಾಪಟುಗಳು ಭಾಗವಹಿಸಲು ಹಾಗೂ ಪೂರ್ವಭಾವಿ ತರಬೇತಿ ಶಿಬಿರ ನಡೆಸಲು ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ನಿಯಮಾನುಸಾರ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

ಇತರೆ ಕ್ರೀಡಾ ಸಂಘ ಸಂಸ್ಥೆಗಳು ರಾಜ್ಯದಲ್ಲಿ ನಡೆಸುವ ಪಂದ್ಯಾವಳಿಗಳಿಗೆ ನಿಯಮಾನುಸಾರ ಪ್ರಾಧಿಕಾರದಿಂದ ಅನುದಾನ ಬಿಡುಗಡೆ ಮಾಡಲಾಗು ತ್ತಿದೆ.

ಅಂತರ್ರಾಷ್ಟ್ರೀಯ ಮಟ್ಟದ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ಪ್ರಾಧಿಕಾರದ ನಿಯಮಾವಳಿ ಅನ್ವಯ ವಿಮಾನಯಾನ / ಇತರೆ ವೆಚ್ಚವನ್ನು ಧನ ಸಹಾಯವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಜಿಲ್ಲಾ ಹಾಗೂ ತಾಲೂಕು ಕ್ರೀಡಾಂಗಣಗಳಲ್ಲಿ ಅಭ್ಯಸಿಸುತ್ತಿರುವ ಕ್ರೀಡಾಸಕ್ತ ಕ್ರೀಡಾಪಟುಗಳಿಗೆ ಪ್ರಾಧಿಕಾರದ ತರಬೇತುದಾರರುಗಳಿಂದ ವಿವಿಧ ಕ್ರೀಡೆಗಳಲ್ಲಿ ಉಚಿತ ದೈನಂದಿನ ಕ್ರೀಡಾ ತರಬೇತಿಯನ್ನು ನೀಡಲಾಗು ತ್ತಿದೆ.

ದೈನಂದಿನ ತರಬೇತಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಪ್ರಾಧಿಕಾರದಿಂದ ನಿಯಮಾನುಸಾರ ಖರೀದಿಸಿ ಒದಗಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.