ವೀರಾಜಪೇಟೆ, ಜೂ. 18: ನಾಲ್ಕು ವರ್ಷಗಳ ಅವಧಿಯಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಸುಮಾರು 300ಕ್ಕೂ ಅಧಿಕ ಗೋವುಗಳು ಕಳವು ಆಗಿದ್ದು ಎಲ್ಲವೂ ಕೇರಳದ ಕಸಾಯಿಖಾನೆ ಸೇರಿದೆಯಾದರೂ ಈ ತನಕ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಆರೋಪಿಗಳು ರಾಜಾರೋಷವಾಗಿ ದಂಧೆ ಮುಂದುವರಿಸಿದ್ದು, ಗೋ ಕಳವು ಆರೋಪಿಗಳನ್ನು 15ದಿನಗಳಲ್ಲಿ ಪತ್ತೆ ಹಚ್ಚದಿದ್ದರೆ ಸಮುಚ್ಚಯ ಪೊಲೀಸ್ ಠಾಣೆಗಳ ಮುಂದೆ ತಾಲೂಕಿನ ಬಿಜೆಪಿ ಹಾಗೂ ವಿವಿಧ ಘಟಕಗಳ ಕಾರ್ಯಕರ್ತರುಗಳು ಮುಷ್ಕರ ಹೂಡುವದಾಗಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಶಾಸಕರ ಕೊಠಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೋಪಯ್ಯ ಗ್ರಾಮಸ್ಥರು, ಪೊಲೀಸ್ ಠಾಣೆಗೆ ಗೋವು ಕಳವು ದೂರು ನೀಡಿದರೆ ದೂರಿಗೆ ಪ್ರತಿಕ್ರಿಯಿಸದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇಂದು ಪೊಲೀಸರು ಪತ್ತೆ ಹಚ್ಚಿದ ತಂಡವನ್ನು ಈ ಹಿಂದೆಯೇ ಬಂಧಿಸಿದ್ದರೆ, ಅಧಿಕ ಸಂಖ್ಯೆಯ ಗೋವುಗಳು ಮಾಲೀಕರ ರಕ್ಷಣೆಯಲ್ಲಿರುತ್ತಿದ್ದವು. ಈಗ ರೈತರು, ಕೃಷಿಕರು ಗೋವುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದು ಪೊಲೀಸ್ ಇಲಾಖೆ ವಿರುದ್ದ ದೂರಿದರು.

ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಗೋವುಗಳ ಕಳವು ಆಗಿ ಮಾಲೀಕರು ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿದರು. ಇಲ್ಲಿನ ಪೊಲೀಸರಿಂದ ಗೋವುಗಳ ಮಾಲೀಕರಿಗೆ ರಕ್ಷಣೆ ಇಲ್ಲದಂತಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ, ಮೇಯಲು ಬಿಟ್ಟಿದ್ದ ಗೋವುಗಳನ್ನು ಹಗಲೇ ಕಳವು ಮಾಡುತ್ತಿದ್ದಾರೆ ಎಂದರು. ನಾಲ್ಕು ವರ್ಷಗಳಿಂದ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳವು ಪ್ರಕರಣ ಪತ್ತೆ ಹಚ್ಚಿದ ದಾಖಲೆಗಳಿಲ್ಲ ಎಂದು ದೂರಿದರಲ್ಲದೆ ಇಲಾಖೆಯ ವಿರುದ್ದ ಉಗ್ರ ಹೋರಾಟಕ್ಕೆ ಪಕ್ಷದ ಕಾರ್ಯಕರ್ತರು ಹಿಂಜರಿಯುವದಿಲ್ಲ ಎಂದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಮನು ಮುತ್ತಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಸದಸ್ಯ ಬಿ.ಎಂ.ಗಣೇಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿ ಸುಬ್ರಮಣಿ, ಸಮಿತಿಯ ಲಾಲ ಭೀಮಯ್ಯ,

ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಕಾಳಪ್ಪ, ಫೆಡರೇಶನ್ ಉಪಾಧ್ಯಕ್ಷ ಮಧುದೇವಯ್ಯ ಹಾಗೂ ಬಿಟ್ಟಂಗಾಲ, ಅಂ¨ಟ್ಟಿ ಸೇರಿದಂತೆ ವಿವಿಧ ಗ್ರಾಮಸ್ಥರು ಹಾಜರಿದ್ದರು.