ಸೋಮವಾರಪೇಟೆ, ಜೂ. 20: ತಾಲೂಕು ಪಂಚಾಯಿತಿ ಸುಪರ್ದಿಯಲ್ಲಿರುವ ಎಲ್ಲಾ ಜಾಗವನ್ನು ಸರ್ವೆ ಮಾಡಿಸಿ, ದಾಖಲಾತಿಗಳನ್ನು ಪಂಚಾಯಿತಿ ಹೆಸರಿಗೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾ.ಪಂ. ಸದಸ್ಯರುಗಳು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸುಪರ್ದಿಯಲ್ಲಿದ್ದ ಜಾಗಗಳು ಸಂಘ-ಸಂಸ್ಥೆ, ಇಲಾಖೆಗಳ ಹೆಸರಿನಲ್ಲಿ ಅನ್ಯರ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ವೆ ಮಾಡಿಸುವಂತೆ ಸದಸ್ಯ ಸತೀಶ್ ಅವರು ಆಗ್ರಹಿಸಿದ ಹಿನ್ನೆಲೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2017-18ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಸಭೆಯು ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದು, ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.

ಸಭೆಯಲ್ಲಿ ತಾ.ಪಂ. ಸದಸ್ಯ ಸತೀಶ್‍ರವರು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯ ಸಮೀಪದಲ್ಲಿ ತಾಲೂಕು ಪಂಚಾಯಿತಿಯ ಜಾಗವಿದ್ದು, ಅಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಆಡಳಿತ ಮಂಡಳಿಯ ಯಾವದೇ ಅನುಮತಿ ಪಡೆಯದೆ ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದೇ ಸಂದರ್ಭ ಉಪಾಧ್ಯಕ್ಷ ಅಭಿಮನ್ಯುಕುಮಾರ್‍ರವರು ಸಂಬಂಧಪಟ್ಟ ಅಭಿಯಂತರರನ್ನು ಪ್ರಶ್ನಿಸಿದಾಗ ನಮಗೆ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾಗವನ್ನು ಸೂಚಿಸಿದ್ದರು. ಅದರಂತೆ ಕಟ್ಟಡ ನಿರ್ಮಾಣ ಮಾಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ ನಮಗೆ ಬೇಳೂರು ಗ್ರಾಮ ಪಂಚಾಯಿತಿ ಜಾಗ ನೀಡಿದೆ ಎಂದು ಉತ್ತರಿಸಿದರು.

ಈ ಉತ್ತರಗಳಿಂದ ತೃಪ್ತರಾಗದ ಉಪಾಧ್ಯಕ್ಷರು, ಈ ಹಿಂದೆ ನಮ್ಮ ಸುಪರ್ದಿಯಲ್ಲಿದ್ದ ಅಲ್ಲಿನ ಜಾಗವನ್ನು ಟೆನ್ನಿಸ್ ಆಟದ ನೆಪದಲ್ಲಿ ಪಿಟಿಸಿ ಕ್ಲಬ್‍ಗೆ ನೀಡಿದ್ದೀರಿ, ಇದೀಗ ಇದ್ದ ಇನ್ನಷ್ಟು ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ನೀಡಿದ್ದೀರಿ, ಇನ್ನುಳಿದಿರುವ ಜಾಗವನ್ನು ತಮಗೆ ಇಷ್ಟ ಬಂದವರಿಗೆ ಕೊಟ್ಟುಬಿಡಿ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿಗಳು ಜಾಗ ನಮ್ಮ ಸುಪರ್ದಿಯಲ್ಲಿತ್ತು, ಆದರೆ ಆರ್‍ಟಿಸಿಯಲ್ಲಿ ಪೈಸಾರಿ ಎಂದಿದೆ ಎಂದು ಸಮಜಾಯಿಷಿಕೆ ನೀಡಿದರು. ಕೂಡಲೇ ತಾ.ಪಂ.ನ ಸುಪರ್ದಿಯಲ್ಲಿರುವ ಎಲ್ಲಾ ಜಾಗವನ್ನು ಸರ್ವೆ ಮಾಡಿಸಿ, ದಾಖಲಾತಿಗಳನ್ನು ಪಂಚಾಯಿತಿ ಹೆಸರಿನಲ್ಲಿ ಮಾಡಿಸುವಂತೆ ತೀರ್ಮಾನಿಸಲಾಗಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು.

ತಾಲೂಕು ಪಂಚಾಯಿತಿ ಅಭಿವೃದ್ಧಿ ಅನುದಾನ ಹಾಗೂ ಸಂಯುಕ್ತ ಅನುದಾನದಲ್ಲಿ 2017-18ನೇ ಸಾಲಿನ ತಾಲೂಕು ಪಂಚಾಯಿತಿಗೊಳಪಡುವ ವಿವಿಧ ಇಲಾಖೆ ಹಾಗೂ ರಸ್ತೆ, ಸೇತುವೆ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರೂ. 207.50 ಲಕ್ಷ ಕ್ರಿಯಾ ಯೋಜನೆಯ ಬಗ್ಗೆ ಅನುಮೋದನೆ ಗಾಗಿ ಚರ್ಚಿಸಲಾಯಿತು.

ಆಯುಷ್ ಇಲಾಖೆಯಿಂದ ಕಟ್ಟಡಕ್ಕೆ ಸಂಬಂಧಿಸಿದಂತೆ 7 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಿ ಉಳಿದಂತೆ ರೂ. 200.50 ಲಕ್ಷಕ್ಕೆ ಅನುಮೋದನೆಯನ್ನು ನೀಡಲಾಯಿತು.

ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ತಾಲೂಕು ಪಂಚಾಯಿತಿ ಸಭಾಂಗಣದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹಲವು ಕೆಲಸಗಳು ನಡೆಯಬೇಕಿದೆ. ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಸಭಾಂಗಣವನ್ನು ತಾ.ಪಂ. ಸಭೆಗಳಿಗೆ ಮಾತ್ರ ಮೀಸಲಿಡಬೇಕು ಎಂದು ಅಭಿಪ್ರಾಯಿಸಿದರು.

ಇಲ್ಲಿ ನಡೆಯುತ್ತಿದ್ದ ಇತರ ಇಲಾಖೆಗಳ ಸಭೆಗಳು, ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಪೂರಕವಾಗುವಂತೆ ಪಂಚಾಯಿತಿ ಆವರಣದಲ್ಲಿ ನಿರ್ಮಾಣವಾಗಿರುವ ಸಾಮಥ್ರ್ಯ ಸೌಧದ ಕಟ್ಟಡವನ್ನು ನವೀಕರಣಗೊಳಿಸಿ, ಅಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದು, ತಾಲೂಕು ಪಂಚಾಯಿತಿ ಕಚೇರಿ ಮೇಲ್ಚಾವಣಿ ದುರಸ್ತಿ, ಸಭಾಂಗಣದಲ್ಲಿ ಆಸನಗಳ ಅಳವಡಿಕೆ, ಸದಸ್ಯರ ಟೇಬಲ್ ಸೇರಿದಂತೆ ಸಭಾಂಗಣ ದೊಳಗೆ ಸಮಗ್ರ ಧ್ವನಿವರ್ಧಕಗಳ ಅಳವಡಿಕೆ ಸೇರಿದಂತೆ ನವೀಕರಣದ ಸಮಗ್ರ ಕಾಮಗಾರಿಗಳಿಗೆ ತಾಲೂಕು ಪಂಚಾಯಿತಿಯ ನಿಧಿ 3 ರ ಅನುದಾನದಲ್ಲಿ ರೂ. 17.81ಲಕ್ಷವನ್ನು ಉಪಯೋಗಿಸುವದು ಸೂಕ್ತ ಎಂದಾಗ ಸಭೆ ಅನುಮೋದನೆ ನೀಡಿತು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.