ಮಡಿಕೇರಿ, ಜೂ. 20: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದ್ದು, ಸರ್ಕಾರದ ಸಾಧನೆಗಳ ಕುರಿತು ಸಾಧನಾ ಸಮಾವೇಶವನ್ನು ತಾ. 23 ರಂದು ನಗರದಲ್ಲಿ ನಡೆಸಲು ಜಿಲ್ಲಾ ಬಿಜೆಪಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ತಾ. 23 ರಂದು ನಗರದ ಕ್ರಿಸ್ಟಲ್ ಹಾಲ್‍ನಲ್ಲಿ ಸಾಧನಾ ಸಮಾವೇಶ ನಡೆಯಲಿದ್ದು, ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್, ರಾಜ್ಯ ಬಿಜೆಪಿ ಮುಖಂಡರು ಹಾಗೂ ಜಿಲ್ಲೆಯ ಬಿಜೆಪಿ ಪ್ರತಿನಿಧಿಗಳು ಪಾಲ್ಗೊಳ್ಳಲಿ ದ್ದಾರೆ ಎಂದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರು ಹಾಗೂ ವ್ಯವಸ್ಥಾಪಕರ ಮುಂದಾಳತ್ವದಲ್ಲಿ ‘ಸಬ್ ಕೇ ಸಾಥ್-ಸಬ್ ಕಾ ವಿಕಾಸ್’ ಘೋಷ ವಾಕ್ಯದೊಂದಿಗೆ ಸಮಾವೇಶ ನಡೆಯಲಿದೆ ಎಂದರು. ಕೇಂದ್ರ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು, ನಿವೃತ್ತ ಯೋಧರ ವೇತನದ ಗೊಂದಲವನ್ನು ‘ಒನ್ ರ್ಯಾಂಕ್ ಒನ್ ಪೆನ್ಶನ್’ ಯೋಜನೆಯ ಮೂಲಕ ಪರಿಹರಿಸುವ ಪ್ರಯತ್ನವನ್ನು ಮಾಡಿದೆ ಎಂದು ಮನು ಮುತ್ತಪ್ಪ ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳ ಅಸಹಕಾರದಿಂದ ಅತ್ಯಂತ ಮಹತ್ವಾ ಕಾಂಕ್ಷೆಯ ಮುದ್ರಾ ಯೋಜನೆಯಿಂದ ಯುವಜನತೆ ವಂಚಿತರಾಗಿದ್ದಾರೆ ಎಂದು ಮನು ಮುತ್ತಪ್ಪ ಆರೋಪಿಸಿ ದರು. ಜನ್‍ಧನ್ ಮೂಲಕ ಸುಮಾರು 28 ಕೋಟಿ ಮಂದಿ ಖಾತೆ ಹೊಂದಿದ್ದು, ದೇಶದ 13 ಕೋಟಿ ಜನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ ಎಂದರು.

ಸಂಸದರ ಬಗ್ಗೆ ತೃಪ್ತಿ ಇದೆ

ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ವರದಿಯನ್ನು ಸಲ್ಲಿಸದಿರುವದೇ ಕಾರಣವೆಂದು ಮನು ಮುತ್ತಪ್ಪ ಟೀಕಿಸಿದ್ದಾರೆ. ಸಂಸದ ಪ್ರತಾಪ ಸಿಂಹ ಅವರ ಕಾರ್ಯವೈಖರಿ ಬಗ್ಗೆ ಜಿಲ್ಲಾ ಬಿಜೆಪಿಗೆ ಸಂತೃಪ್ತಿ ಇದೆ. ಹೋರಾಟದ ಮನೋಭಾವವಿಲ್ಲದ ಕಾಂಗ್ರೆಸ್ ಮಂದಿ ಸಂಸದರ ರಾಜೀನಾಮೆಗೆ ಒತ್ತಾಯಿಸುವದು ಅರ್ಥಹೀನ.

ಸಂಸದರ ನಿಧಿಯ ಅನುಷ್ಠಾನ ದಲ್ಲಿ ಪ್ರತಾಪ ಸಿಂಹ ಎರಡನೇ ಸ್ಥಾನದಲ್ಲಿದ್ದಾರೆ. ರಾಜ್ಯ ಸರ್ಕಾರ ಸಮರ್ಪಕವಾದ ವರದಿ ನೀಡದೆ ಇರು ವದರಿಂದ ಸೂಕ್ಷ್ಮ ಪರಿಸರ ವಲಯ ಘೋಷಣೆಯಾಗಿದ್ದು, ಸಂಸದರು ನಿರ್ಲಕ್ಷ್ಯ ವಹಿಸಿಲ್ಲವೆಂದು ಮನು ಮುತ್ತಪ್ಪ ಸಮಜಾಯಿಷಿಕೆ ನೀಡಿದರು.

ತಾ. 22 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ವಿಭಾಗದವರೇ ಆದ ಬಿ.ಎಸ್. ಯಡಿಯೂರಪ್ಪ, ಸಿ.ಟಿ. ರವಿ ಅವರು ಹಾಜರಿರುವದರಿಂದ ಸೂಕ್ಷ್ಮ ಪರಿಸರ ವಲಯದ ಕುರಿತು ಚರ್ಚಿಸಲಾಗುವದು ಎಂದು ಮನು ಮುತ್ತಪ್ಪ ಭರವಸೆ ನೀಡಿದರು. ಈ ವಿಚಾರದಲ್ಲಿ ರಾಜಕೀಯ ರಹಿತ ಹೋರಾಟಕ್ಕೆ ಬಿಜೆಪಿ ಸದಾ ಸಿದ್ಧವಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೀಡಿದ ವರದಿಯನ್ನು ಸಾರ್ವಜನಿಕ ರೆದುರು ಬಹಿರಂಗಪಡಿಸಬೇಕೆಂದು ಅವರು ಒತ್ತಾಯಿಸಿದರು.

ರವೀಂದ್ರ ಸಕ್ರಿಯರಲ್ಲ

ಪರಿಸರವಾದಿಗಳ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಚಿಮಾಡ ರವೀಂದ್ರ ಬಿಜೆಪಿಯ ಹಿತೈಷಿಯಷ್ಟೆ. ಅವರು ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲ. ಎಲ್ಲರಂತೆ ಅವರು ಕೂಡ ಬಿಜೆಪಿ ಸದಸ್ಯತ್ವ ಹೊಂದಿದ್ದಾರೆ ಎಂದು ಮನು ಮುತ್ತಪ್ಪ ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ಲಿಂಗೇಗೌಡ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜೋಕಿಂ ರಾಡ್ರಿಗಸ್ ಹಾಗೂ ಜಿಲ್ಲಾ ಬಿಜೆಪಿ ಪ್ರಮುಖ ಅರುಣ್ ಕುಮಾರ್ ಉಪಸ್ಥಿತರಿದ್ದರು.