ಕೂಡಿಗೆ, ಜೂ. 20 : ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭಗೊಳ್ಳುತ್ತಿದ್ದಂತೆ ಅಭಿವೃದ್ಧಿ ಅಧಿಕಾರಿ ಸಭೆಯ ನಡಾವಳಿಯನ್ನು ಓದಲು ಪ್ರಾರಂಭಿಸಿದಾಗ ಕೇಂದ್ರ ಸರ್ಕಾರದ 14ನೇ ಹಣಕಾಸಿನ ಯೋಜನೆಯ 1 ಲಕ್ಷ ರೂಗಳನ್ನು ಸದಸ್ಯರುಗಳ ಗಮನಕ್ಕೆ ತಾರದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೀಡಿರುವದನ್ನು ಸದಸ್ಯರುಗಳು ಖಂಡಿಸಿದರು.

ಗ್ರಾಮ ಪಂಚಾಯ್ತಿಯ ಕಳೆದ ಮಾಸಿಕ ಸಭೆಯಲ್ಲಿ ಇಲಾಖೆಗೆ ನೀಡಬಾರದೆಂದು ತೀರ್ಮಾನಿಸಿದ್ದರೂ ಸದಸ್ಯರುಗಳ ಮಾತನ್ನು ತಿರಸ್ಕರಿಸಿ, ಸದಸ್ಯರುಗಳ ಗಮನಕ್ಕೆ ಬಾರದೆ ಮನಬಂದಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮತ್ತು ಅಭಿವೃದ್ಧಿ ಅಧಿಕಾರಿಗಳ ಕ್ರಮವನ್ನು ವಿರೋಧಿಸಿದರು.

ಹೆಚ್.ಎಸ್. ಮಧುಸೂದನ್, ಹೆಚ್.ಆರ್.ವಿಜಯ್‍ಕುಮಾರ್, ದಿನೇಶ್ ಹೆಚ್.ಟಿ, ಹೆಚ್.ಎಸ್. ಚೇತನ್, ಶಿವನಂಜಪ್ಪ, ಹೆಚ್.ಕೆ. ವೆಂಕಟೇಶ್, ಅಶೋಕ್, ಮಂಜುಳಾ, ಪ್ರೇಮ, ದೇವಮ್ಮ, ಪದ್ಮ ಸಭಾಂಗಣದಲ್ಲೇ ಧರಣಿ ನಡೆಸಿದರು.

ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ರೂ. 1 ಲಕ್ಷ ಮಂಜೂರಾಗಿದ್ದು, ಸದಸ್ಯರುಗಳ ಕ್ಷೇತ್ರವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಉಪಯೋಗಿಸುವ ಹಣವಾಗಿರುತ್ತದೆ. ಆದರೆ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ನೀಡಿದರು ಎಂಬ ನೆಪದಲ್ಲಿ ಈ ಹಣವನ್ನು ಗ್ರಾಮದ ಪ್ರಗತಿಗೆ ಉಪಯೋಗಿಸದೇ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ನೀಡಿರುವದು ಸರಿಯಾದ ಕ್ರಮವಲ್ಲ. ಹಣವನ್ನು ಉಪಯೋಗಿಸುವ ವಿಷಯದಲ್ಲಿ ಲೋಪ ಎಸಗಿದ್ದಾರೆ ಎಂದು ಸದಸ್ಯರಾದ ಮಧುಸೂದನ್ ಮತ್ತು ವಿಜಯ್‍ಕುಮಾರ್ ಆರೋಪಿಸಿದರು.

ಹೆಬ್ಬಾಲೆ ಗ್ರೇಡ್-1 ಪಂಚಾಯಿತಿ ಆಗಿದ್ದು, 14 ಸದಸ್ಯರನ್ನು ಹೊಂದಿದೆ. ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಸಭೆಯ ನಡಾವಳಿಕೆಯನ್ನು ಬದಲಾಯಿಸಿರುವದು ಸಮಂಜಸವಲ್ಲ ಎಂದು ಸದಸ್ಯರು ದೂರಿದರು. ಈ ಕಾರಣದಿಂದಾಗಿ ಅನೇಕ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯಬೇಕಿದ್ದ ಸಭೆಯು ಪ್ರಾರಂಭದಲ್ಲೇ ಮೊಟಕುಗೊಂಡಿತು.

ಕಳೆದ ಮಾಸಿಕ ಸಭೆ ನಡೆಯದೆ ಸಭಾತ್ಯಾಗವಾಗಿದ್ದರೂ ಯಾವದೇ ಚರ್ಚೆಗಳು ಆಗದೆ ಇದ್ದರೂ ಇಂದು ಅಭಿವೃದ್ಧಿ ಅಧಿಕಾರಿ ಮಾಸಿಕ ಸಭೆಯ ಪುಸ್ತಕದಲ್ಲಿ ಮಾಸಿಕ ಸಭೆ ನಡೆಸಲಾಗಿದೆ ಎಂದು ದಾಖಲಿಸಿರುವದು ಸರಿಯಾದ ಕ್ರಮವಲ್ಲ ಎಂದು ಒಂಭತ್ತು ಮಂದಿ ಸದಸ್ಯರುಗಳು ಆರೋಪಿಸಿದರು.

ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸಭೆಯನ್ನು ನಡೆಸುವದಿಲ್ಲ, ಯಾವದೇ ಚರ್ಚೆಗೂ ಅವಕಾಶ ವಿರುವದಿಲ್ಲ, ಅಧಿಕಾರಿಗಳು ಬಂದು ಈ ವಿಚಾರದ ಬಗ್ಗೆ ಕೂಲಂಕಷವಾಗಿ ಮಾಹಿತಿ ನೀಡುವವರೆಗೂ ಧರಣಿ ಮುಂದುವರೆಸಲಾಗುವದು ಎಂದು ಧರಣಿ ನಿರತ ಸದಸ್ಯರು ತಿಳಿಸಿದರು.

ಈ ಸಂದರ್ಭ ಸ್ಥಳಕ್ಕೆ ತೆರಳಿದ ಸುದ್ಧಿಗಾರರೊಂದಿಗೆ ಅಧ್ಯಕ್ಷೆ ಕೆ.ಎನ್.ಲತಾ ಮಾತನಾಡುತ್ತಾ, ಗ್ರಾಮ ಪಂಚಾಯಿತಿ 1 ಲಕ್ಷರೂ ಹಣವನ್ನು ಅನವಶ್ಯಕವಾಗಿ ವ್ಯಯ ಮಾಡಿರುವದಿಲ್ಲ. ಮಾಸಿಕ ಸಭೆಯಲ್ಲಿ ಸದಸ್ಯರುಗಳ ಅನುಮತಿಯನ್ನು ಪಡೆಯಬಹುದು ಎಂಬ ನಿರೀಕ್ಷೆಯ ಮೇರೆಗೆ ನೂರಾರು ಜನರಿಗೆ ಕುಡಿಯುವ ನೀರಿನ ಯೋಜನೆಗೆ ಹಣದ ಅವಶ್ಯಕತೆಯಿದ್ದುದರಿಂದ ಈ ಹಣವನ್ನು ನೀಡಲಾಗಿದೆ ಎಂದರು.

200ಕ್ಕೂ ಅಧಿಕ ಅರ್ಜಿಗಳು ಇಂದಿನ ಸಭೆಗೆ ಬಂದಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಅವಕಾಶವಿತ್ತು, ಆದರೆ ಸದಸ್ಯರುಗಳು ಉದ್ದೇಶಪೂರ್ವಕವಾಗಿ ಈ ಒಂದು ವಿಚಾರವಾಗಿ ಧರಣಿ ನಡೆಸುತ್ತಿರುವದು ಗ್ರಾಮ ಪಂಚಾಯಿತಿಗೆ ಶೋಭೆ ತರುವಂತಹದ್ದಲ್ಲ ಎಂದು ಅಧ್ಯಕ್ಷೆ ಲತಾ ಹೇಳಿದರು.

ಅಭಿವೃದ್ದಿ ಅಧಿಕಾರಿ ರಾಕೇಶ್ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಮುಖೇನ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ರೂ. 1 ಲಕ್ಷ ನೀಡುವಂತೆ ಪತ್ರವ್ಯವಹಾರ ನಡೆಸಿದನ್ವಯ ಅವರ ಆದೇಶದ ಅನುಗುಣವಾಗಿ ಹಣವನ್ನು ನೀಡಲಾಗಿದೆ. ಮೇಲಾಧಿಕಾರಿಗಳ ಆದೇಶದಂತೆ ಅಧ್ಯಕ್ಷರೊಂದಿಗೆ ಚರ್ಚಿಸಿ ಅವರ ಅನುಮತಿಯ ನಂತರ ಹಣವನ್ನು ನೀಡಲಾಗಿದೆ. ಮೇಲಾಧಿಕಾರಿಗಳ ಆದೇಶವನ್ನು ತಿರಸ್ಕರಿಸುವ ಅಧಿಕಾರ ತನಗಿಲ್ಲದಿದ್ದಾಗ ಅಧ್ಯಕ್ಷರೊಂದಿಗೆ ಚರ್ಚಿಸಿಯೇ ಈ ಹಣವನ್ನು ನೀಡಲಾಗಿದೆ. ಹಣ ಇನ್ನಾವದೇ ರೀತಿಯ ಕೆಲಸಕ್ಕೆ ವಿನಿಯೋಗಿಸಿಲ್ಲ ಎಂದು ತಿಳಿಸಿದರು.