ಕೂಡಿಗೆ, ಜೂ. 20: ಕೂಡಿಗೆಯ ಕೆನರಾ ಬ್ಯಾಂಕ್ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಸಮುದಾಯ ಭವನದಲ್ಲಿ ಸ್ಥಳೀಯ ಗ್ರಾಮಸ್ಥರುಗಳಿಗೆ ಹಾಗೂ ಆದಿವಾಸಿಗಳಿಗೂ ಅನುಕೂಲವಾಗುವಂತೆ ಆರ್ಥಿಕ ಸಾಕ್ಷರತಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಡಿ. ಅಣ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಆರ್ಥಿಕ ಶಿಬಿರಗಳು ನಡೆಯುವದರಿಂದ ಬ್ಯಾಂಕಿನತ್ತ ಎಲ್ಲಾ ವರ್ಗದವರು ತೆರಳಿ ತಮ್ಮ ವ್ಯವಹಾರವನ್ನು ನಡೆಸಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯದ ಜೊತೆಗೆ ಸರ್ಕಾರಗಳ ವಿವಿಧ ಯೋಜನೆಗಳನ್ನು ಸದ್ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಆರ್ಥಿಕ ಸಾಕ್ಷರತಾ ಶಿಬಿರದಿಂದ ಗ್ರಾಮೀಣ ಮಟ್ಟದ ಜನರು ತಾವು ದುಡಿದ ಹಣವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು, ಉಳಿತಾಯ ಮಾಡಬಹುದು. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಉಳಿತಾಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿವಿಧ ರೀತಿಯಲ್ಲಿ ನೀಡುವ ಸಾಲಸೌಲಭ್ಯವನ್ನು ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವದು ಮುಖ್ಯ ಎಂದು ಅತಿಥಿಗಳಾಗಿ ಆಗಮಿಸಿದ್ದ ಕೂಡಿಗೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಪುರುಷೋತ್ತಮ್ ಮಾಹಿತಿ ನೀಡಿದರು.

ಈ ಸಂದರ್ಭ ಬ್ಯಾಂಕಿನ ಅಧಿಕಾರಿಗಳಾದ ನಾರಾಯಣ, ಗೋಕುಲ್, ಮಂಜುಳಾ ಸೇರಿದಂತೆ ಶಿಬಿರದಲ್ಲಿ 150 ಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಂಡಿದ್ದರು.