ಗೋಣಿಕೊಪ್ಪಲು, ಜೂ. 20: ಉದ್ದೇಶಿತ ಮಡಿಕೇರಿ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಅರಣ್ಯ ಇಲಾಖೆಯಿಂದ ಪ್ರಥಮ ಹಂತದ ಅನುಮತಿ ದೊರೆತಿದ್ದು, 2ನೇ ಹಂತದ ಅನುಮೋದನೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.ಪೆÇನ್ನಂಪೇಟೆ-ವೀರಾಜಪೇಟೆ, ಮಡಿಕೇರಿ-ಕುಶಾಲನಗರ 66 ಕೆ.ವಿ. ವಿದ್ಯುತ್ ಮಾರ್ಗ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿದ್ದು, ಮಡಿಕೇರಿ-ವೀರಾಜಪೇಟೆ ಸಂಪರ್ಕ ಕಾಮಗಾರಿಗೆ ಮಡಿಕೇರಿ ಸಮೀಪ ಕರ್ಣಂಗೇರಿಯ ಅರಣ್ಯ ಪ್ರದೇಶ, ಈಸ್ಟ್ ರಿಸರ್ವ್ ಫಾರೆಸ್ಟ್ ವ್ಯಾಪ್ತಿಯಲ್ಲಿ ವಿದ್ಯುತ್ ಗೋಪುರಗಳ ಅಳವಡಿಕೆ ಕಾರ್ಯ ಸುಮಾರು 6-7 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದಾಗಿ ವೀರಾಜಪೇಟೆ ತಾಲೂಕಿನ ಬಹುತೇಕ ಗ್ರಾಮಗಳು ಮಳೆಗಾಲ ಅವಧಿಯಲ್ಲಿ ಅನಿಯಮಿತ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತಿತ್ತು. ಸಣ್ಣ ಮಳೆಗಾಳಿಗೂ ಇಲ್ಲಿನ ‘ಪವರ್ ಕಟ್’ ಕಿರಿಕಿರಿಯನ್ನು ವಿದ್ಯುತ್ ಗ್ರಾಹಕರು ಅನುಭವಿಸಬೇಕಾಗಿತ್ತು.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಇಂಧನ ಸಚಿವರಿಗೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಿಂದ ವೀರಾಜಪೇಟೆಗೆ 66 ಕೆ.ವಿ. ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸಲು ಯಾವಾಗ ಮಂಜೂರಾತಿ ದೊರೆತಿದೆ?, ಮಂಜೂರಾಗಿದ್ದಲ್ಲಿ ಕೆಲಸ ಪ್ರಾರಂಭಿಸಲಾಗಿದೆಯೇ?, ಅರಣ್ಯ ಇಲಾಖೆಯಿಂದ ಈ ಕಾಮಗಾರಿ ಪ್ರಾರಂಭಿಸಲು ಅನುಮತಿ ನಿರಾಕರಿಸಲಾಗಿದೆಯೇ, ಕಾರಣಗಳೇನು? ಎಂದು ಕೇಳಲಾದ ಪ್ರಶ್ನೆಗೆ ಸಚಿವ ಡಿ.ಕೆ. ಶಿವಕುಮಾರ್ ಉತ್ತರ ನೀಡಿದ್ದಾರೆ.

ಮಡಿಕೇರಿ ನಗರದಿಂದ ವೀರಾಜಪೇಟೆಗೆ 66 ಕೆ.ವಿ. ಪ್ರಸರಣಾ ಮಾರ್ಗದ ವಿಸ್ತ್ರತ ಯೋಜನಾ ವರದಿಗೆ ತಾ.25-05-2010ರಂದು ಜರುಗಿದ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅನುಮೋದನೆ ದೊರೆತಿರುತ್ತದೆ. ಉದ್ದೇಶಿತ ಕಾಮಗಾರಿಯನ್ನು ತಾ. 5.5.2011 ರಂದು ಪ್ರಾರಂಭಿಸಲಾಗಿತ್ತು. ಆದರೆ ಸದರಿ

(ಮೊದಲ ಪುಟದಿಂದ) ಮಾರ್ಗವು ಈಸ್ಟ್ ರಿಸರ್ವ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಹಾದುಹೋಗುವದರಿಂದ, ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದ ಕಾರಣ ತಾ. 6.7.2013 ರಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಕರ್ಣಂಗೇರಿ-ಮಡಿಕೇರಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಹಾದುಹೋಗಿರುವ ಮತ್ತು ನಿಷ್ಕ್ರಿಯಗೊಂಡಿರುವ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ 66 ಕೆ.ವಿ. ನೂತನ ವಿದ್ಯುತ್ ಮಾರ್ಗವನ್ನು ಕೊಂಡೊಯ್ಯಲು ಅರಣ್ಯ ಇಲಾಖೆಯಿಂದ ಮೊದಲನೇ ಹಂತದ ಅನುಮತಿ ದೊರೆತಿದೆ. 2 ನೇ ಹಂತದ ಅನುಮೋದನೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ನಂತರ ನೂತನ ಮಾರ್ಗ ವಿದ್ಯುತ್ ಗೋಪುರ ಅಳವಡಿಕೆ ಕಾರ್ಯ ಆರಂಭಿಸಲಾಗುವದು ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ. - ಟಿ.ಎಲ್. ಶ್ರೀನಿವಾಸ್