ಸೋಮವಾರಪೇಟೆ, ಜೂ. 18: ಪಿಕ್‍ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟದಲ್ಲಿ ತೊಡಗಿದ್ದ ತಂಡವನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸರು, ಆರೋಪಿಯೋರ್ವನನ್ನು ಬಂಧಿಸಿದ್ದು, ಇತರ ಈರ್ವರು ಪರಾರಿಯಾಗಿದ್ದಾರೆ.

ತಾಲೂಕಿನ ಮಾದಾಪುರದಲ್ಲಿ ಅಕ್ರಮವಾಗಿ ಮರಳು ಸಾಗಾಟದಲ್ಲಿ ತೊಡಗಿದ್ದ ಹ್ಯಾರೀಸ್ ಬಂಧಿತ ಆರೋಪಿಯಾಗಿದ್ದರೆ, ಉಳಿದ ಆರೋಪಿಗಳಾದ ಜಂಬೂರು ಬಾಣೆಯ ಶಾಫಿ, ಮತ್ತು ಬಿಪಿನ್ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮಾದಾಪುರದ ಗ್ರಾಮ ಪಂಚಾಯಿತಿ ಎದುರಿನ ರಸ್ತೆಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ಪರಶಿವಮೂರ್ತಿ ನೇತೃತ್ವದ ತಂಡ ಧಾಳಿ ನಡೆಸಿದೆ.

ಮರಳು ತುಂಬಿದ್ದ ಪಿಕಪ್ ವಾಹನ (ಕೆ.ಎ.12 ಎ.4724) ಮತ್ತು ಬೆಂಗಾವಲಿಗಿದ್ದ ಸ್ವಿಫ್ಟ್ ಕಾರನ್ನು (ಕೆ.ಎ. 12 ಎನ್ 8076) ವಶಪಡಿಸಿ ಕೊಂಡಿದ್ದು, ಹ್ಯಾರೀಸ್‍ನನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಹದೇವಸ್ವಾಮಿ, ಪ್ರವೀಣ್ ಅವರುಗಳು ಭಾಗವಹಿಸಿದ್ದರು.