ಮಡಿಕೇರಿ, ಜೂ. 18: ರಾಜ್ಯ ವಿಧಾನ ಪರಿಷತ್ ಸಭಾಪತಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಫಲಿತಾಂಶ ಏನಾಗಿದೆ ಎಂಬದು ಎಲ್ಲರಿಗೂ ಗೊತ್ತಾಗಿದೆ. ಸಭಾಪತಿ ಡಿ.ಎಚ್. ಶಂಕರಮೂರ್ತಿ ಪದಚ್ಯುತಿಗೊಳಿಸಲು ಪಣ ತೊಟ್ಟಿದ್ದ ಕಾಂಗ್ರೆಸ್ ಮುಖಭಂಗ ಅನುಭವಿಸಬೇಕಾಯಿತು. ಇಲ್ಲಿ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು, ಜೆಡಿಎಸ್ ಪಕ್ಷ; ಕಾಂಗ್ರೆಸ್‍ನ ಅವಿಶ್ವಾನ ನಿರ್ಣಯದ ಪರವಾಗಿ ನಿಲ್ಲದ ಜೆಡಿಎಸ್ ಒಂದು ರೀತಿಯಲ್ಲಿ ಬಿಜೆಪಿಯೊಂದಿಗೆ ದೋಸ್ತಿಯಾಗಿರುವಂತೆ ಸಹಕರಿಸುವ ಮೂಲಕ ಶಂಕರಮೂರ್ತಿ ಬೆಂಬಲಕ್ಕೆ ನಿಂತಿತ್ತು.

ಈ ಪೀಠಿಕೆ ಇಲ್ಲಿಗೆ ಯಾಕೆ ಎಂದು ಹುಬ್ಬೇರಿಸಬೇಡಿ. ಕೊಡಗಿನ ಏಕೈಕ ನಗರಸಭೆಯಾಗಿರುವ ಮಡಿಕೇರಿ ನಗರಸಭೆಯ ಆಡಳಿತ ವಿಚಾರಕ್ಕೂ ಇದು ತಳಕು ಹಾಕುತ್ತಿರುವ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಕಾರಣವಾಗಿರುವದು ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದು, ಜೆಡಿಎಸ್‍ನ ಹೊಸ್ತಿಲಲ್ಲಿದ್ದಾರೆ. ಇದು ವಿಶ್ವನಾಥ್ ವಿಚಾರವಾದರೆ ನಗರಸಭೆಗೆ ಏನು ಸಂಬಂಧ ಎಂಬ ಪ್ರಶ್ನೆ ಕಾಡುತ್ತಿದೆಯೇ? ಇದೇ ಕೌತುಕದ ವಿಚಾರ.

ತಾ. 17 ರಂದು ಮಡಿಕೇರಿಯಲ್ಲಿ ಹೆಚ್. ವಿಶ್ವನಾಥ್ ವಿಶ್ವಾಸಿಗಳ ಸಭೆಯೊಂದು ಜರುಗಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯನ್ನು ಲೆಕ್ಕಿಸದೆ ಹಲವು ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದಾರೆ. ವಿಶ್ವನಾಥ್ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ನಗರಸಭಾ ಸದಸ್ಯರೂ ಆಗಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹಾಗೂ ಅವರ ಸಂಗಡಿಗರ ಪಾತ್ರ ಇಲ್ಲಿ ಹೆಚ್ಚಿದೆ. ಗಣೇಶ್ ಅವರೊಂದಿಗೆ ನಗರಸಭೆಯ ಕಾಂಗ್ರೆಸ್‍ನ ಸದಸ್ಯರಾಗಿರುವ ಶ್ರೀಮತಿ ಬಂಗೇರ, ವೀಣಾಕ್ಷಿ, ಲೀಲಾ ಶೇಷಮ್ಮ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಾಜಿ ಅಧ್ಯಕ್ಷೆ ಜುಲೇಕಾಬಿ ಸಭೆಗೆ ಕಾಲು ಹಾಕಿದರೂ ಪೂರ್ತಿಯಾಗಿ ಕಾಣಿಸಿಕೊಂಡಿಲ್ಲ.

ಮಡಿಕೇರಿ ನಗರಸಭೆಯ ಆಡಳಿತ ಪ್ರಸ್ತುತ ಕಾಂಗ್ರೆಸ್‍ನ ಹಿಡಿತದಲ್ಲಿದೆ. ಕಳೆದ ಹಲವು ತಿಂಗಳ ಹಿಂದೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅದೃಷ್ಟದ ಮೂಲಕ ಪ್ರಯಾಸದಲ್ಲಿ ಕಾಂಗ್ರೆಸ್, ಎಸ್‍ಡಿಪಿಐ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಉಳಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ ಇಬ್ಬರು ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಕಾರಣದಿಂದ ಇವರನ್ನು ಸದಸ್ಯತ್ವದಿಂದ ವಜಾಗೊಳಿಸುವದಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದ್ದರೂ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ ಅನರ್ಹಗೊಳಿಸಿದ್ದ ವಿಚಾರ ಸೋಲು ಕಂಡಿದೆ.

ಇದೀಗ ಈ ಸದಸ್ಯರಿಬ್ಬರು ಮತ್ತೆ ವಿಶ್ವನಾಥ್ ಬೆಂಬಲಿಗರ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವನಾಥ್ ವಿಶ್ವಾಸಿಗಳ ಸಭೆಯ ನಾಯಕರಂತಿರುವ ಕೆ.ಎಂ. ಗಣೇಶ್ ಹಾಗೂ ಮಾಜಿ ಅಧ್ಯಕ್ಷೆ ಜುಲೇಕಾಬಿ ಹಾಗೂ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಅವರುಗಳೂ ಇತ್ತ ಆಸಕ್ತಿ ತೋರಿಸಿರುವದರಿಂದ ನಗರಸಭೆಯ ಆಡಳಿತ ಮುಂದೇನಾಗಬಹುದೆಂಬ ಕುತೂಹಲ ಮೂಡಿದೆ. ನಿನ್ನೆಯ ಸಭೆಯ ಬೆಳವಣಿಗೆ ಗಮನಿಸಿದರೆ, ವಿಶ್ವನಾಥ್ ಸದ್ಯದಲ್ಲಿ ಅಧಿಕೃತವಾಗಿ ಪಕ್ಷ ತೊರೆಯುವದು ಖಚಿತ. ಪಕ್ಷ ತೊರೆದಲ್ಲಿ ಸೇರ್ಪಡೆಯಾಗುವದು ಜೆಡಿಎಸ್‍ಗೆ ಎಂಬದೂ ನಿರ್ವಿವಾದ ಇವರು ಜೆಡಿಎಸ್ ಸೇರಿದಲ್ಲಿ ಈ ವಿಶ್ವಾಸಿಗಳೂ ಬಹುತೇಕ ಅವರ ಹಿಂದೆ ತೆರಳುವ ಸಾಧ್ಯತೆಯೇ ಹೆಚ್ಚು.

ನಗರಸಭೆಯ ಈಗಿನ ಸ್ಥಿತಿ

ನಗರಸಭೆಯ 23 ವಾರ್ಡ್‍ಗಳ ಪೈಕಿ ಆರಂಭದಲ್ಲಿ 10 ಮಂದಿ ಕಾಂಗ್ರೆಸ್ ಸದಸ್ಯರು, ಬಿಜೆಪಿ 8, ಎಸ್‍ಡಿಪಿಐ 4

(ಮೊದಲ ಪುಟದಿಂದ) ಹಾಗೂ ಜೆಡಿಎಸ್ ಓರ್ವ ಸದಸ್ಯರನ್ನು ಹೊಂದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಆಗ ಸಂಸದರಾಗಿದ್ದ ವಿಶ್ವನಾಥ್ ಹಾಗೂ ಎಂಎಲ್‍ಸಿ ಟಿ. ಜಾನ್ ಅವರ ಮತವೂ ಇದ್ದುದ್ದರಿಂದ ಅನಾಯಾಸವಾಗಿ ಅಧಿಕಾರ ಹಿಡಿದಿತ್ತು.

ಆದರೆ ಎರಡನೇ ಅವಧಿಯ ಚುನಾವಣೆ ಬಂದಾಗ ಪರಿಸ್ಥಿತಿ ವ್ಯತಿರಿಕ್ತವಾಗಿತ್ತು. ಕಾಂಗ್ರೆಸ್‍ಗೆ ವಿಶ್ವನಾಥ್ ಹಾಗೂ ಟಿ.ಜಾನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರಿಂದ ಇವರ ಬಲ ಕಡಿಮೆಯಾಗಿತ್ತು. ಅದೃಷ್ಟವೆಂಬಂತೆ ವೀಣಾ ಅಚ್ಚಯ್ಯ ಎಂಎಲ್‍ಸಿಯಾದ್ದರಿಂದ ಇವರ ಸ್ಥಾನ ಮಾತ್ರ ಲಾಭವಾಗಿತ್ತು. ಆದರೆ ಬಿಜೆಪಿಗೆ ಮಡಿಕೇರಿ ಶಾಸಕರೊಂದಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಎಂಎಲ್‍ಸಿ ಸುನಿಲ್ ಸುಬ್ರಮಣಿ ಅವರ ಬಲ ಹೆಚ್ಚುವರಿಯಾಗಿತ್ತು. ಇದರೊಂದಿಗೆ ಕಾಂಗ್ರೆಸ್‍ನ ಅತೃಪ್ತ ಇಬ್ಬರು ಸದಸ್ಯರನ್ನು ಓಲೈಸಿಕೊಂಡ ಬಿಜೆಪಿ ರಾಜಕೀಯ ತಂತ್ರಗಾರಿಕೆ ನಡೆಸಿತ್ತು. ಕೌತುಕ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಎಸ್‍ಡಿಪಿಐನ ನಾಲ್ವರು ಬೆಂಬಲ ನೀಡಿದರೂ ಇಬ್ಬರು ಕೈಕೊಟ್ಟ ಹಿನ್ನೆಲೆಯಲ್ಲಿ ತಲಾ 13 ಮತ ಲಭ್ಯವಾಗಿ ಲಾಟರಿ ಮೂಲಕ ಫಲಿತಾಂಶ ನಿರ್ಧಾರವಾಗಿತ್ತು. ಅಧ್ಯಕ್ಷ ಸ್ಥಾನದ ಅದೃಷ್ಟ ಕಾಂಗ್ರೆಸ್‍ಗೆ ದೊರೆತರೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ಹಿಡಿದಿತ್ತು. ಆ ದಿನ ಮತದ ಹಕ್ಕಿದ್ದ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದಲ್ಲಿ ಬಿಜೆಪಿ ಅಂದೇ ಅಧಿಕಾರ ಹಿಡಿದಿರುತಿತ್ತು.

ಇದೀಗ ಹೊಸ ಅಧ್ಯಕ್ಷರ ನೇಮಕವಾಗಿ ಆರು ತಿಂಗಳು ಕಳೆದಿದೆ. ಕಾಂಗ್ರೆಸ್‍ನಲ್ಲಿನ ಹೊಸ ಬೆಳವಣಿಗೆ ಮತ್ತೆ ಸಂಚಲನ ಮೂಡಿಸುವಂತಿದೆ. ಒಂದು ವೇಳೆ ವಿಶ್ವನಾಥ್‍ರೊಂದಿಗೆ ನಿನ್ನೆಯ ಸಭೆಯಲ್ಲಿ ಪಾಲ್ಗೊಂಡಿದ್ದವರು ಕಾಂಗ್ರೆಸ್‍ಗೆ ಕೈ ಕೊಟ್ಟರೆ...? ಎಂಬದು ಚರ್ಚೆಗೊಳಪಡುತ್ತಿದೆ. ಜೆಡಿಎಸ್‍ನ ಏಕೈಕ ಸದಸ್ಯೆ ಈಗಾಗಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅವಕಾಶದ ಲಾಭ ಪಡೆಯಲು ಬಿಜೆಪಿ ಮುಂದಾದರೆ ನಗರಸಭೆಯಲ್ಲಿ ಮತ್ತೊಂದು ರಾಜಕೀಯ ಸಮರ ಖಚಿತ. ನಿನ್ನೆಯ ಸಭೆಯಲ್ಲಿ ಪಾಲ್ಗೊಂಡಿದ್ದ ಐವರು ವಿಶ್ವನಾಥ್‍ರೊಂದಿಗೆ ಜೆಡಿಎಸ್‍ನತ್ತ ಹೆಜ್ಜೆ ಹಾಕಿದಲ್ಲಿ ಕಾಂಗ್ರೆಸ್‍ನ ಬಲ ಮತ್ತೆ ಕುಸಿಯಲಿದೆ. ಎಸ್‍ಡಿಪಿಐ ಹಾಗೂ ವೀಣಾ ಅಚ್ಚಯ್ಯ ಬೆಂಬಲ ಇದ್ದರೂ ಇವರ ಬಲ 10 ಕ್ಕೆ ಇಳಿಯಲಿದೆ. ಬಿಜೆಪಿಗೂ 11 ಸಂಖ್ಯಾಬಲವಿದ್ದು, ಜೆಡಿಎಸ್‍ನ ಸಂಗೀತಾ ಪ್ರಸನ್ನ ಸೇರಿ 12 ಮತ ಖಚಿತ.

ಅವಿಶ್ವಾಸ ಗೊತ್ತುವಳಿಗೆ 9 ಸದಸ್ಯರು ಬೇಕು

ಮೇಲ್ಮನೆಯಲ್ಲಿ ಸಭಾಪತಿ ಸ್ಥಾನ ಉಳಿಸಲು ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದಂತೆ ಇಲ್ಲೂ ಹೊಂದಾಣಿಕೆಯಾದಲ್ಲಿ ಬಿಜೆಪಿಗೆ 17 ಸದಸ್ಯರ ಬಲ ದೊರೆತಂತಾಗಲಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನಗರಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಒಟ್ಟು ಮತದ ಅಧಿಕಾರವಿರುವ ಸದಸ್ಯರ ಪೈಕಿ 1/3 ಸದಸ್ಯರು ಸಹಿ ಮಾಡಿ ಅಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಿದೆ. ಮಡಿಕೇರಿ ನಗರಸಭೆ 23 ವಾರ್ಡ್ ಹೊಂದಿದ್ದು, ಈ 23 ಸದಸ್ಯರು ಹಾಗೂ ಇವರೊಂದಿಗೆ ಮತದ ಹಕ್ಕು ಇರುವ ಸಂಸದರು, ಶಾಸಕರು ಸೇರಿ ಒಟ್ಟು 27 ಮಂದಿಗೆ ಅಧಿಕಾರವಿದೆ. (ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚುರಂಜನ್, ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ) 1/3 ಸದಸ್ಯರೆಂದರೆ ಕನಿಷ್ಟ 9 ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿ ಅರ್ಜಿ ಸಲ್ಲಿಸಬೇಕಾಗಿದೆ.

ಕನಿಷ್ಟ 18 ಮತ ಅತ್ಯಗತ್ಯ

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬದಕ್ಕೆ ಹಲವಾರು ನಿದರ್ಶನಗಳಿವೆ. ಇದರಂತೆ ಈಗಿನ ಚರ್ಚೆಗಳ ಅನುಸಾರ ಈ ಎಲ್ಲಾ ಬೆಳವಣಿಗೆಗಳೇ ನಡೆದು ಅವಿಶ್ವಾಸ ಗೊತ್ತುವಳಿ ಮಂಡನೆಯಾದಲ್ಲಿ ಈ ಕುರಿತ ಸಭೆಯ ದಿನದಂದು ಮತದಾನ ನಡೆದಲ್ಲಿ ಎಲ್ಲಾ 27 ಮಂದಿ ಹಾಜರಾದಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ ಒಟ್ಟು ಸದಸ್ಯ ಬಲದ ಪೈಕಿ 2/3 ಮೆಜಾರಿಟಿ (ಅಂದರೆ ಕನಿಷ್ಟ 18 ಮಂದಿ) ಇರುವದು ಅತ್ಯಗತ್ಯವಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ರಾಜಕೀಯ ಕದನ ಏನೇ ನಡೆದರೂ ನಿಯಮಾನುಸಾರ ಈ ಸಂಖ್ಯಾಬಲಬೇಕಿದೆ. ಕಾಂಗ್ರೆಸ್‍ಗೆ ಕೊರತೆ, ಬಿಜೆಪಿಗೆ ಅನುಕೂಲ, ಜೆಡಿಎಸ್‍ನ ಹೊಸ ಪ್ರಯತ್ನದ ಕಸರತ್ತಿನ ನಡುವೆ ಕಾಂಗ್ರೆಸ್ ಹೊರತುಪಡಿಸಿ ಮೇಲ್ಮನೆಯಂತೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೂ (ಐದು ಮಂದಿ ಸೇರ್ಪಡೆಯಾದಲ್ಲಿ) ಈಗಿನ ಸನ್ನವೇಶದಲ್ಲಿ ಒಂದು ಸದಸ್ಯ ಬಲದ ಕೊರತೆ ಎದುರಾಗಲಿದ್ದು, ಯಾವ ರೀತಿಯ ರಾಜಕೀಯ ಮೇಲಾಟಗಳು ನಡೆಯಲಿದೆ ಎಂಬದನ್ನು ಕಾದು ನೋಡಬೇಕಿದೆ. ಅಧಿಕಾರ ಉಳಿಸಿಕೊಳ್ಳುವದು ಕಾಂಗ್ರೆಸ್‍ನ ಚಿಂತನೆಯಾದರೆ ಹಾಕಿ ಆಟದ ನಿಯಮಾವಳಿಯಂತೆ ‘ಡಿ’ ಆವರಣದಲ್ಲಿ ಬಾಲ್ ಸಿಕ್ಕಿದರೆ ಗೋಲು ಬಾರಿಸುವ ಪ್ರಯತ್ನ ಬಿಜೆಪಿಯದ್ದು ಎಂಬದು ಸದ್ಯದ ಚರ್ಚೆಯ ಮುಖ್ಯಾಂಶ.